ನಿಮ್ಮ ಸೇವೆಯನ್ನು ರದ್ದುಗೊಳಿಸಲಾಗಿದೆ; ದುಬೈಯಿಂದ ಎಸ್ಎಂಎಸ್
ನವದೆಹಲಿ, ಸೋಮವಾರ, 30 ನವೆಂಬರ್ 2009( 08:37 IST )
ದುಬೈಗೆಂದು ಕೆಲಸ ಅರಸಿಕೊಂಡು ಹೋಗಿ ಕನಸುಗಳ ಗೋಪುರ ಕಟ್ಟುತ್ತಿದ್ದ ಭಾರತೀಯರಿಗೆ ಈಗ ಕರಾಳ ಅಮವಾಸ್ಯೆ. ಆರ್ಥಿಕ ವಿಪತ್ತಿಗೆ ಸಿಲುಕಿರುವ ಗಲ್ಫ್ ರಾಷ್ಟ್ರಗಳ ಹಲವು ಕಂಪನಿಗಳು ತಮ್ಮ ನೌಕರರನ್ನು ಏಕಾಏಕಿ ಕೈ ಬಿಡುತ್ತಿರುವುದೇ ಇದಕ್ಕೆ ಕಾರಣ. ಈದ್‌ಗೆಂದು ಕಳೆದ ವಾರ ಊರಿಗೆ ಬಂದವರಿಗೆ 'ನಿಮ್ಮ ಸೇವೆಯನ್ನು ಅಮಾನತುಗೊಳಿಸಲಾಗಿದೆ' ಎಂಬ ಎಸ್ಎಂಎಸ್ ಆಘಾತ ತಂದಿದೆ.
ದುಬೈಗೆ ಹೋಗಲೆಂದು ಸಿಕ್ಕಸಿಕ್ಕಲ್ಲಿ ಸಾಲ ಮಾಡಿ ಬದುಕು ಹಸನಾಗಿಸುವ ಕಾರ್ಯಕ್ಕೆ ಇಳಿದಿದ್ದ ಹಲವರದ್ದು ಈಗ ಅತ್ತ ದರೆ, ಇತ್ತ ಪುಲಿ ಎಂಬಂತಹ ಸ್ಥಿತಿ. ಕಳೆದ ಹಲವಾರು ತಿಂಗಳುಗಳಿಂದ ಸಿಗದ ಸಂಬಳಕ್ಕಾಗಿ ಕಾಯುತ್ತಾ ಕುಳಿತಿರುವ ಇವರಿಗೆ ಊರಿಗೆ ಬರಲೂ ಆಗುತ್ತಿಲ್ಲ. ಲಕ್ಷಗಟ್ಟಲೆ ಸಾಲ ಮಾಡಿಟ್ಟಿರುವವರು ಊರಿಗೆ ಬಂದರೆ ತೀರಿಸುವುದು ಹೇಗೆ ಎಂಬ ತಲೆನೋವು ಬೇರೆ.
ಗಾರೆ ಕೆಲಸ, ಎಲೆಕ್ಟ್ರಿಷಿಯನ್, ಪ್ಲಂಬರ್, ಡ್ರೈವರ್, ಕಾಂಟ್ರಾಕ್ಟರ್ ಮುಂತಾದ ಕೆಲಸಗಳಲ್ಲಿ ನಿರತರಾಗಿದ್ದವರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಗಲ್ಫ್ ಎಂಬ ಸುಂದರ ಕಲ್ಪನೆ ಕಟ್ಟಿಕೊಂಡಿದ್ದ ಅವರಿಗೆ ಈಗ ಎಲ್ಲವೂ ಅಯೋಮಯವಾಗಿದೆ.
ಕರ್ನಾಟಕದಲ್ಲಿ ಹೆಚ್ಚಾಗಿ ಮಂಗಳೂರು ಮತ್ತು ಉತ್ತರ ಕನ್ನಡದವರು ಗಲ್ಫ್ ರಾಷ್ಟ್ರಗಳಲ್ಲಿ ಹಲವೆಡೆ ಉದ್ಯೋಗ ಮಾಡುತ್ತಿದ್ದಾರೆ. ದುಬೈ ಆರ್ಥಿಕ ಸಂಕಷ್ಟದಿಂದಾಗಿ ಹಲವು ಕುಟುಂಬಗಳು ಈಗ ದಿಕ್ಕೇ ತೋಚದಂತಾಗಿವೆ.
ಮೀರತ್‌ನ ಸಾಜಿದ್ ಎಂಬವರು ಕಳೆದ ವಾರವಷ್ಟೇ ಹೆಂಡತಿ, ಮಕ್ಕಳೊಂದಿಗೆ ಈದ್‌ಗೆಂದು ಊರಿಗೆ ಬಂದಿದ್ದರು. ಇನ್ನೇನು ದುಬೈಗೆ ಹೊರಟು ಬಿಡಬೇಕು ಎನ್ನುವಷ್ಟರಲ್ಲಿ 'ನಿಮ್ಮನ್ನು ಕೆಲಸದಿಂದ ವಜಾ ಮಾಡಲಾಗಿದೆ' ಎಂಬ ತುರ್ತು ಸಂದೇಶವೊಂದು ಎಸ್ಎಂಎಸ್ ಮೂಲಕ ಬಂದು ಬಿದ್ದಿದೆ. ಇದು ಅವರೊಬ್ಬರ ಪರಿಸ್ಥಿತಿಯಲ್ಲ, ಇವರೊಂದಿಗೆ ಕೆಲಸ ಮಾಡುತ್ತಿದ್ದ 10ಕ್ಕೂ ಹೆಚ್ಚು ಮಂದಿಯದ್ದೂ ಇದೇ ಕಥೆ.
'ಇಂದು ಮುಂಜಾನೆ ನನ್ನ ಕಚೇರಿಯಿಂದ ನನಗೊಂದು ಎಸ್ಎಂಎಸ್ ಸಂದೇಶ ಬಂತು. ನೀವು ದುಬೈಗೆ ವಾಪಸಾಗುವ ಅಗತ್ಯವಿಲ್ಲ ಎಂದು ನಮ್ಮ ಸಂಸ್ಥೆ ಆಲ್-ಅಮೀದ್ ಸೂಚನೆ ನೀಡಿತು. ನಿಮ್ಮ ಒಪ್ಪಂದವನ್ನು ಮೊಟಕುಗೊಳಿಸಲಾಗಿದೆ ಮತ್ತು ಕೆಲಸದ ಅನುಮತಿಯನ್ನು ಕೂಡ ರದ್ದು ಮಾಡಲಾಗಿದೆ ಎಂದು ಹೇಳಲಾಯಿತು. ಅಲ್ಲದೆ ನಿಮಗೆ ಬರಬೇಕಿರುವ ಬಾಕಿ ವೇತನವನ್ನು ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ. ಸಂಬಂಧಪಟ್ಟ ವಸ್ತುಗಳನ್ನು ತಡವಾಗಿಯಾದರೂ ನಿಮಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ' ಎಂದು ಸಾಜಿದ್ ತನ್ನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ದುಬೈಯಲ್ಲಿ ಕೆಲಸ ಮಾಡುತ್ತಿದ್ದ ಮೀರತ್‌ನ ಶಾಲಿಮರ್ ಗಾರ್ಡನ್, ಗೋಕಲ್ಪುರ್, ಶಹಪೀರ್ ಮುಂತಾದ ಪ್ರದೇಶಗಳ ಕನಿಷ್ಠ 64 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇವರೆಲ್ಲ ಟೈಲ್ ತಯಾರಿಕಾ ಸಂಸ್ಥೆ, ಕಟ್ಟಡ ನಿರ್ಮಾಣ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು.
ದುಬೈಯಲ್ಲಿ ಕಳೆದ ವರ್ಷ ಭಾರತದ ಸುಮಾರು 3.4 ಲಕ್ಷ ಮಂದಿ ಹೊಸ ಕೆಲಸಗಳಲ್ಲಿ ಸೇರಿಕೊಂಡಿದ್ದರು. ಅವರಲ್ಲಿ ಬಹುತೇಕ ಮಂದಿಗೀಗ ತಮ್ಮ ಕೆಲಸದ್ದೇ ಚಿಂತೆ.