ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ವೇಳೆ ಆಗಿನ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ ಅವರು ಮೃತಪಟ್ಟ ಸ್ಥಳ ಹಾಗೂ ಅವರು ಕೊನೆಯುಸಿರೆಳೆದ ಸಮಯದ ಕುರಿತ ನಿಜಾಂಶವನ್ನು ಉನ್ನತ ಪೊಲೀಸ್ ಅಧಿಕಾರಿ ರಾಕೇಶ್ ಮರಿಯ ಅವರು ತಮ್ಮ ಕುಟುಂಬದವರಿಂದ ಮುಚ್ಚಿಟ್ಟಿದ್ದರು ಎಂಬುದಾಗಿ ಕಾಮ್ಟೆ ಪತ್ನಿ ವಿನಿತಾ ಕಾಮ್ಟೆ ಇತ್ತೀಚೆಗೆ ಬಿಡುಗಡೆಗೊಂಡ ತಮ್ಮ ಪುಸ್ತಕ 'ಟು ದ ಲಾಸ್ಟ್ ಬುಲೆಟ್'ನಲ್ಲಿ ಆರೋಪಿಸಿದ್ದಾರೆ.
ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಗಫೂರ್ ಅಹಮದ್ ಅವರು ತಮ್ಮ ಮೇಲೆ ಹೇರಿದ ಒತ್ತಡದ ಹಿನ್ನೆಲೆಯಲ್ಲಿ ತಾವು ಮೊದಲ ಬಾರಿ ಮರಿಯ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದಾಗ "ಅಶೋಕ್ ಕಾಮ್ಟೆ ಅವರು ನವೆಂಬರ್ 26ರಂದು ರಾತ್ರಿ 11.50ಕ್ಕೆ ಮೃತಪಟ್ಟಿದ್ದರು" ಎಂಬುದಾಗಿ ಮರಿಯ ತಿಳಿಸಿದ್ದರು. ಆದರೆ, ಕಾಮ್ಟೆ ನನಗೆ ಅದೇ ದಿನ 11.58ಕ್ಕೆ ದೂರವಾಣಿ ಕರೆ ಮಾಡಿದ್ದರು ಎಂದು ಹೇಳಿದಾಗ ಮರಿಯ ಅವರು ನನ್ನನ್ನು ದಿಟ್ಟಿಸಿ ನೋಡಿದ್ದರು ಎಂದು ವಿನಿತಾ ಬರೆದಿದ್ದಾರೆ.
ದಾಳಿ ಸಂದರ್ಭದಲ್ಲಿ ಸೆರೆ ಸಿಕ್ಕ ಏಕೈಕ ಉಗ್ರ ಕಸಾಬ್ ಮೇಲೆ ಗುಂಡು ಹಾರಿಸಿದವರು ಯಾರು ಎಂಬ ಪ್ರಶ್ನೆಗೆ ಮರಿಯ ಅವರು ಮೂರು ಬೇರೆ ಬೇರೆ ರೀತಿಯ ಉತ್ತರಗಳನ್ನು ನೀಡಿದ್ದರು. ಆದರೆ ಕೊನೆಗೆ ಅಶೋಕ್ ಕಾಮ್ಟೆ ಅವರೇ ಕಸಾಬ್ ಮೇಲೆ ಗುಂಡು ಹಾರಿಸಿದ್ದರು ಎಂಬುದನ್ನು ಒಪ್ಪಿಕೊಂಡರು ಎಂದೂ ವಿನಿತಾ ಆರೋಪಿಸಿದ್ದಾರೆ.
ನ. 26ರ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಮರಿಯ ಅವರು ಅಶೋಕ್ ಕಾಮ್ಟೆ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ಆಗಿನ ಪೊಲೀಸ್ ಕಮಿಷನರ್ ಗಫೂರ್ ಅವರಿಗೆ ಮಾಹಿತಿ ನೀಡಿದ್ದರು. ಆದರೆ ಈ ದುರಂತದ ಬಗ್ಗೆ ಅವರೇ ನಿಯಂತ್ರಿಸುತ್ತಿದ್ದ ಕಂಟ್ರೋಲ್ ರೂಮಿಗೆ ಮೊದಲೇ ಸಂದೇಶ ರವಾನಿಸಲಾಗಿತ್ತು ಎಂಬುದನ್ನು ದೂರವಾಣಿ ಕರೆಯ ದಾಖಲೆಗಳು ಹಾಗೂ ವೈರ್‌ಲೆಸ್ ದಾಖಲೆಗಳು ತೋರಿಸುತ್ತವೆ ಎಂದೂ ಅವರು ಹೇಳಿದ್ದಾರೆ.
ಅಶೋಕ್ ಕಾಮ್ಟೆ ಅವರು ಕಸಾಬ್ ಮೇಲೆ ಗುಂಡು ಹಾರಿಸಿದ್ದರು ಮತ್ತು ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಮತ್ತು ಎನ್‌ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಾಸ್ಕರ್ ಯಾವುದೇ ಪ್ರತಿರೋಧ ತೋರದೆ ಉಗ್ರರ ಗುಂಡಿಗೆ ಬಲಿಯಾದರು ಎಂಬುದನ್ನು ಬಹಿರಂಗ ಪಡಿಸಲು ಮರಿಯ ಅವರಿಗೆ ಇಷ್ಟವಿರಲಿಲ್ಲ ಎಂದು ವಿನಿತಾ ಹೇಳಿಕೊಂಡಿದ್ದಾರೆ.
ತನಗೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿರುವ ಹಿನ್ನೆಲೆಯಲ್ಲಿ ತಾನು ಈ ಎಲ್ಲಾ ಮಾಹಿತಿಯಿನ್ನು ಮಾಹಿತಿ ಹಕ್ಕು ಕಾಯ್ದೆಯನ್ವಯ ಕಲೆ ಹಾಕಿರುವುದಾಗಿ ಅವರು ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದರು.