ಉಗ್ರರಿಗೆ ಕೈಗೆ ಪಾಕ್ ಅಣ್ವಸ್ತ್ರ ಲಭಿಸಿದೆಯೇ: ಕಪೂರ್ ಪ್ರಶ್ನೆ
ಪುಣೆ, ಸೋಮವಾರ, 30 ನವೆಂಬರ್ 2009( 10:01 IST )
ತನ್ನ ಅಣ್ವಸ್ತ್ರಗಳ ಮೇಲೆ ಪಾಕಿಸ್ತಾನ ನಿಯಂತ್ರಣ ಹೊಂದಬೇಕು ಮತ್ತು ಅವುಗಳು ಸರ್ಕಾರದ ನಿಯಂತ್ರಣ ತಪ್ಪಿ ಉಗ್ರರ ಕೈ ಸೇರಿವೆಯೇ ಎಂಬುದನ್ನು ಪಾಕಿಸ್ತಾನ ಖಚಿತ ಪಡಿಸಿಕೊಳ್ಳಬೇಕು ಎಂದು ಸೇನಾ ಮುಖ್ಯಸ್ಥ ಜನರಲ್ ದೀಪಕ್ ಕಪೂರ್ ಒತ್ತಾಯಿಸಿದ್ದಾರೆ. "ಪಾಕ್ ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರದಿಂದ ಅಣ್ವಸ್ತ್ರಗಳು ಉಗ್ರರ ಕೈ ಸೇರಿವೆ" ಎಂಬ ಮಾಧ್ಯಮ ವರದಿಗೆ ಪ್ರತಿಕ್ರಿಯಿಸಿ ಅವರು ಮಾತನಾಡುತ್ತಿದ್ದರು.
ಈ ಮಧ್ಯೆ, ಚೀನಾದೊಂದಿಗೆ ಭಾರತ ಉತ್ತಮ ಬಾಂಧವ್ಯ ಹೊಂದಿದ್ದು ಗಡಿ ವಿವಾದದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದೂ ಅವರು ತಿಳಿಸಿದ್ದಾರೆ. ಉಗ್ರರ ಒಳನುಸುಳುವಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಕಾಶ್ಮೀರದಲ್ಲಿ ಹಿಮಪಾತಕ್ಕೂ ಮುನ್ನ ಉಗ್ರರ ಚಟುವಟಿಕೆಗಳು ಹೆಚ್ಚುವುದು ಸಾಮಾನ್ಯ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸೇನಾಪಡೆಯ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು "ಪರಮಾಣು, ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳು ಯುದ್ಧಕ್ಕೆ ಆಧುನಿಕ ಆಯಾಮ ಒದಗಿಸಿದ್ದು ಹೊಸ ಬಗೆಯ ಯುದ್ಧ ತಂತ್ರಗಳನ್ನು ಎದುರಿಸುವ ಶಕ್ತಿ ಯೋಧರಿಗೆ ಬರಬೇಕು" ಎಂದು ಹೇಳಿದ್ದಾರೆ.