ಎಫ್‌ಬಿಐ ಬಂಧನದಲ್ಲಿರುವ ಶಂಕಿತ ಲಷ್ಕರೆ ಉಗ್ರ ತಹವೂರ್ ಹುಸೇನ್ ರಾಣಾ ತನಗೂ ಮುಂಬೈ ದಾಳಿಗೂ ಸಂಬಂಧ ಇರುವುದನ್ನು ನಿರಾಕರಿಸಿದ್ದಾನೆ ಎಂಬುದಾಗಿ ಆತನ ವಕೀಲರು ತಿಳಿಸಿದ್ದಾರೆ. ಅಲ್ಲದೆ ಈ ಪಾಕಿಸ್ತಾನಿ ಮೂಲದ ಕೆನಾಡ ಪ್ರಜೆಗೆ ಭಾರತದ ವಿರುದ್ಧ ಯಾವುದೇ ದ್ವೇಷ ಇಲ್ಲ ಎಂದೂ ಅವರು ಹೇಳಿದ್ದಾರೆ.
ರಾಣಾ ಹಾಗೂ ಇನ್ನೋರ್ವ ಶಂಕಿತ ಲಷ್ಕರೆ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ ಎಫ್‌ಬಿಐ ಬಂಧನಕ್ಕೀಡಾದ ಬಳಿಕ ಭಾರತದ ವಿರುದ್ಧ ಲಷ್ಕರೆ ಪರವಾಗಿ ದಾಳಿ ನಡೆಸುವ ಯೋಜನೆ ಹೊಂದಿದ್ದರು ಎಂದು ಸಂಶಯಿಸಲಾಗಿದ್ದು, ಇವರಿಗೂ ಮುಂಬೈ ದಾಳಿಗೂ ಸಂಪರ್ಕಗಳಿರಬಹುದು ಎಂಬುದಾಗಿ ಸಂಶಯಿಸಿದ ಬಳಿಕ ಹೊರಬಿದ್ದಿರುವ ಪ್ರಥಮ ಹೇಳಿಕೆ ಇದಾಗಿದೆ.
"ಮುಂಬೈಯಲ್ಲಿ ಕಳೆದ ವರ್ಷ ನಡೆದಿರುವ ದುರಂತದ ದಾಳಿಯಲ್ಲಿ ತಾನು ಪಾಲ್ಗೊಂಡಿಲ್ಲ ಎಂಬುದಾಗಿ ಆತ ಖಚಿತವಾಗಿ ನಿರಾಕರಿಸುತ್ತಾನೆ" ಎಂಬುದಾಗಿ ರಾಣಾನ ವಕೀಲ ಪ್ಯಾಟ್ರಿಕ್ ಬ್ಲೆಗೆನ್ ಅವರು ಇಲ್ಲಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಆತನಿಗೆ ಭಾರತೀಯರ ಮೇಲೆ ಯಾವುದೇ ದುರುದ್ದೇಶವಿಲ್ಲ ಮತ್ತು ಈ ರಾಷ್ಟ್ರದೊಂದಿಗಿನ ಕೌಟುಂಬಿಕ ಬಂಧನವನ್ನು ಆತ ಮುಂದುವರಿಸುತ್ತಾನೆ" ಎಂದು ಅವರು ಹೇಳಿದ್ದಾರೆ.