ಕೋಟ್ಯಂತರ ರೂಪಾಯಿ ಹವಾಲ ಹಗರಣದ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ ಅವರನ್ನು ಕೊನೆಗೂ ಜಾರಿ ನಿರ್ದೇಶನಾಲಯದ(ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್) ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.
ಸುಮಾರು 4ಸಾವಿರ ಕೋಟಿ ರೂಪಾಯಿ ಹವಾಲಾ ಹಗರಣದ ಆರೋಪ ಎದುರಿಸುತ್ತಿದ್ದ ಮಧು ಕೋಡಾರನ್ನು ಇಂದು ಚೈಬಾಸದಲ್ಲಿ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಕೋಡಾ ಅವರ ಬಂಧನದ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಮಧು ಕೋಡಾ ಅವರ ವಿರುದ್ಧ ಐಪಿಸಿ ಸೆಕ್ಷನ್ 420, 426ಸೇರಿದಂತೆ ಹಲವಾರು ಕಾಯ್ದೆ ದಾಖಲಿಸಲಾಗಿದೆ. ಇದೀಗ ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನವದೆಹಲಿಗೆ ಕರೆದೊಯ್ಯಿದ್ದಾರೆ.
ತನ್ನ ಮೇಲಿನ ಭ್ರಷ್ಟಾಚಾರ ಆರೋಪ ಸಾಬೀತಾದ್ರೆ ರಾಜಕೀಯವಾಗಿ ನಿವೃತ್ತಿ ಹೊಂದುವೆ ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಮಧು ಕೋಡಾ, ಜಾರ್ಖಂಡ್ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ, ತನ್ನನ್ನು ರಾಜಕೀಯವಾಗಿ ಮುಗಿಸಲು ವಿರೋಧಿಗಳು ಹೂಡಿದ ಷಡ್ಯಂತ್ರ ಎಂದೇ ವಾದಿಸುತ್ತಲೇ ಬಂದಿದ್ದರು. ಆ ನಿಟ್ಟಿನಲ್ಲಿ ಮಧು ಕೋಡಾ ಮೇಲಿನ ಆರೋಪ ಸಾಬೀತಾದಲ್ಲಿ 5ವರ್ಷಕ್ಕಿಂತಲೂ ಹೆಚ್ಚಿನ ಶಿಕ್ಷೆ ಆಗುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.