ಇಶ್ರತ್ ಜಹಾನ್ ಹಾಗೂ ಇತರ ಮೂವರ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮುಂದಿನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಗುಜರಾತ್ ಹೈಕೋರ್ಟಿಗೆ ಸುಪ್ರೀಂ ತಡೆಯಾಜ್ಜೆ ನೀಡಿದ್ದು, ಗುಜರಾತ್‌ನ ನರೇಂದ್ರ ಮೋದಿ ಸರ್ಕಾರಕ್ಕೆ ಇನ್ನೊಂದು ಮುಖಭಂಗ ಉಂಟಾಗಿದೆ.
ನ್ಯಾಯಮೂರ್ತಿಗಳಾದ ಬಿ. ಸುದರ್ಶನ್ ರೆಡ್ಡಿ ಹಾಗೂ ದೀಪಕ್ ವರ್ಮಾ ಅವರೊನ್ನೊಳಗೊಂಡ ನ್ಯಾಯಪೀಠವು ಸೋಮವಾರ ಈ ತಡೆಯಾಜ್ಞೆ ನೀಡಿದೆ. ಮೃತ ಇಶ್ರತ್‌ಳ ತಾಯಿ ಶಮೀಮಾ ಕೈಸರ್ ಅವರು ಗುಜರಾತ್ ಹೈಕೋರ್ಟ್ ಪ್ರಕರಣವನ್ನು ನ.30ಕ್ಕೆ ವಿಲೇವಾರಿ ಮಾಡುವ ನಿರ್ಧಾರ ಕೈಗೊಂಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗಾಗಲೇ ಸರ್ಕಾರಕ್ಕೆ ನೋಟೀಸು ನೀಡಿರುವ ಕಾರಣ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸುವುದು ಸರಿಯಲ್ಲ ಎಂಬುದಾಗಿ ಕೌಸರ್ ಪರವಾಗಿ ವಕೀಲೆ ಕಾಮಿನಿ ಜೈಸ್ವಾಲ್ ಸಲ್ಲಿಸಿದ್ದ ತುರ್ತು ಅರ್ಜಿಯಲ್ಲಿ ವಾದಿಸಲಾಗಿತ್ತು.
ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ವೇಳೆ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ನಿಗದಿ ಪಡಿಸಿದೆ.
ಈ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಅವರು ಇದು ನಕಲಿ ಎನ್‌ಕೌಂಟರ್ ಎಂದು ಹೇಳಿದ್ದು, ಇದನ್ನೊಂದು ಕೊಲೆ ಎಂದು ಬಣ್ಣಿಸಿದ್ದರು. ಇದು ಗುಜರಾತ್ ಸರ್ಕಾರಕ್ಕೆ ಹಿನ್ನಡೆಯುಂಟು ಮಾಡಿತ್ತು.
ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಕೊಲೆಗಾಗಿ ಅಹಮದಾಬಾದ್‌ಗೆ ಆಗಮಿಸಿದ್ದು, ಇವರಿಗೆ ಉಗ್ರರ ಸಂಪರರ್ಕವಿದೆ ಎಂದು ಗುಜರಾತ್ ಸರ್ಕಾರ ತಿಳಿಸಿದೆ.
19ರ ಹರೆಯದ ಇಶ್ರತ್ ಜಹಾನ್ ಹಾಗೂ ಇತರ ಮೂವರಾದ ಜಾವೇದ್ ಗುಲಾಂ ಶೇಕ್ ಅಲಿಯಾಸ್ ಪ್ರಾಣೇಶ್ ಕಮಾರ್ ಪಿಳ್ಳೈ, ಅಮ್ಜದ್ ಅಲಿ ಅಲಿಯಾಸ್ ರಾಜ್ಕುಮಾರ್ ಅಕ್ಬರ್ ಅಲಿ ರಾಣಾ ಮತ್ತು ಜಿಸಾನ್ ಜೋಹರ್ ಅಬ್ದುಲ್ ಗನಿ ಎಂಬವರನ್ನು ಗುಜರಾತ್ ಪೊಲೀಸರು 2004ರ ಜೂನ್ 15ರಂದು ಗುಂಡಿಟ್ಟು ಕೊಂದಿದ್ದರು.