ಸರ್ಕಾರಕ್ಕೆ ಅತ್ಯಂತ ಬೇಕಾಗಿರುವ ಉಲ್ಫಾ(ಅಸ್ಸಾಂ ಸಂಘಟಿತ ಮುಕ್ತಿ ರಂಗ) ಉಗ್ರನೊಬ್ಬ ಕಳೆದ ಮೂವತ್ತು ವರ್ಷಗಳಿಂದ ಆಫೀಸಿಗೆ ಚಕ್ಕರ್ ಹೊಡೆದಿದ್ದರೂ, ಅಸ್ಸಾಂನಲ್ಲಿ ಕೇಂದ್ರ ಸರ್ಕಾರಿ ನೌಕರನಾಗೇ ಮುಂದಿರುವ ಕೌತುಕದ ಕುರಿತು ವರದಿಯಾಗಿದೆ.
ನಿಷೇಧಿತ ಉಲ್ಫಾದ ಸ್ವಯಂಶೈಲಿಯ ಕಮಾಂಡರ್ ಆಗಿರುವ ಪರೇಶ್ ಬರುವಾ ಈಶಾನ್ಯ ರೈಲ್ವೇಯ ಉದ್ಯೋಗಿ. 1978ರಲ್ಲಿ ಕ್ರೀಡಾ ಕೋಟಾದಲ್ಲಿ ಈತನಿಗೆ ಪೂರ್ವ ಅಸ್ಸಾಂನ ತೀನ್‌ಸುಕಿಯಾ ವಿಭಾಗದಲ್ಲಿ ಕೂಲಿ (ಪೋರ್ಟರ್) ಕೆಲಸ ಲಭಿಸಿತ್ತು. ಈತ ಫುಟ್ಬಾಲ್ ಪಟುವಾಗಿದ್ದ.
"ನಾವು ಪೋರ್ಟರ್ ಕೆಲಸಕ್ಕೆ ಒಟ್ಟಿಗೆ ಸೇರಿದ್ದೆವು. ನಮ್ಮ ಮಾಸಿಕ ವೇತನ 370 ರೂಪಾಯಿ ಆಗಿತ್ತು. ಪರೇಶ್ ರೈಲ್ವೇ ಪರವಾಗಿ ಫುಟ್ಬಾಲ್ ಆಡುತ್ತಿದ್ದು, ಆತ ಅಭ್ಯಾಸ ಅವಧಿಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಪಾಲ್ಗೊಳ್ಳುತ್ತಿದ್ದ. ಆದರೆ ಆತ 1980ರಲ್ಲಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು ಅಮೇಲೆ ಆತನ ಪತ್ತೆಯೇ ಇಲ್ಲ" ಎಂಬುದಾಗಿ ಸುಪ್ರಿಯೋ ಚೌಧರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಚೌಧರಿ ಈಗ ರೈಲ್ವೇಯಲ್ಲಿ ನಿರ್ವಾಹಕರಾಗಿ ಭಡ್ತಿ ಪಡೆದಿದ್ದಾರೆ.
ಬರುವಾ 1979ರಲ್ಲಿ ಇತರ ಐವರೊಂದಿಗೆ ಉಲ್ಫಾವನ್ನು ರೂಪಿಸಿದ್ದ. ಇವರಲ್ಲಿ ಸ್ವಯಂಶೈಲಿಯ ಅಧ್ಯಕ್ಷ ಅರವಿಂದ ರಾಜ್‌ಕೋವಾ ಸೇರಿದ್ದಾರೆ. ಇವರಿಬ್ಬರು ಬಾಂಗ್ಲಾದ ಹೊರಗಿನಿಂದ ಕಾರ್ಯಾಚರಿಸುತ್ತಿದ್ದರೆಂದು ಹೇಳಲಾಗಿದೆ. ಆದರೆ ಗುಪ್ತಚರ ಮಾಹಿತಿಗಳ ಪ್ರಕಾರ ಬರುವಾ ಆಶ್ರಯಕ್ಕಾಗಿ ಚೀನಕ್ಕೆ ಪರಾರಿಯಾಗಿರಬಹುದು ಎಂಬುದಾಗಿ ಸಂಶಯಿಸಲಾಗಿದೆ.
ಆದರೆ ಮೂರು ದಶಕಗಳಿಗೂ ಅಧಿಕ ಕಾಲದಿಂದ ಕಚೇರಿಗೆ ಗೈರುಹಾಜರಾಗುತ್ತಿದ್ದರೂ ಆತ ರೈಲ್ವೇ ದಾಖಲೆಗಳ ಪ್ರಕಾರ ಇನ್ನೂ ರೈಲ್ವೇ ಉದ್ಯೋಗಿ!
"ಪರೇಶ್ ಬರುವಾ ಎಂಬಾತ ಅತ್ಯಂತ ಸುದೀರ್ಘ ಕಾಲದಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ. ಆದರೆ, ಆತನ ವೇತನ ಚೀಟಿ ಶೂನ್ಯವನ್ನೇ ತೋರಿಸುತ್ತಿದ್ದರೂ, ದಾಖಲೆಗಳ ಪ್ರಕಾರ ಆತ ಇನ್ನೋ ರೈಲ್ವೈ ನೌಕರ" ಎಂಬುದಾಗಿ ತೀನ್‌ಸುಕಿಯಾದ ಉಪ ರೈಲ್ವೇ ವ್ಯವಸ್ಥಾಪಕ ಸಂಜಯ್ ಮುಖರ್ಜಿ ಹೇಳುತ್ತಾರೆ.
"ಉಲ್ಫಾ ನಾಯಕ ಪರೇಶ್ ಬರುವಾ ಹಾಗೂ ನಮ್ಮ ದಾಖಲೆಗಳಲ್ಲಿರುವ ಪರೇಶ್ ಬರುವಾ ಒಬ್ಬನೆಯಾ ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆದಿದೆ. ಆತ ರೈಲ್ವೇಗೆ ದಾಖಲಾಗಿದ್ದಾಗ ಯಾವುದೇ ಭಾವಚಿತ್ರಗಳನ್ನು ನೀಡದಿರುವ ಕಾರಣ ಅದನ್ನು ಪತ್ತೆಮಾಡುವುದು ಈಗ ಕಷ್ಟಕರ" ಎಂಬುದಾಗಿಯೂ ಅವರು ಹೇಳುತ್ತಾರೆ.
ತೀನ್‌ಸುಕಿಯ ಜಿಲ್ಲೆಯ ಜೆರೈಗಾಂವ್ ಗ್ರಾಮದವನಾಗಿರುವ ಬರುವಾನನ್ನು ಅತ್ಯಂತ ಘೋರ ಹಿಂಸಾತ್ಮಕ ವ್ಯಕ್ತಿಯೆಂದು ಪರಿಗಣಿಸಲಾಗಿದ್ದು ಈತನ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟೀಸ್ ನೀಡಿದೆ.