ಸಂಸತ್ತಿನಲ್ಲಿ ಪ್ರಮುಖ ಕಲಾಪಗಳು ನಡೆಯುತ್ತಿರುವ ವೇಳೆ ತನ್ನ ಪಕ್ಷದ ಸಂಸದರು ಪದೇಪದೇ ಗೈರು ಹಾಜರಾಗುತ್ತಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗರಂ ಆಗಿದ್ದು, ಸೋಮವಾರದ ಪ್ರಶ್ನೋತ್ತರ ಅವಧಿಯಲ್ಲಿ ಕಲಾಪದಿಂದ ಗೈರು ಹಾಜರಾಗಿದ್ದ ಸಂಸದರ ಪಟ್ಟಿಯನ್ನು ಕೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ, ಪ್ರಶ್ನೆಗಳ ವಿರುದ್ಧ ತಮ್ಮ ಹೆಸರು ಗುರುತಿಸಲಾಗಿದ್ದ ಸುಮಾರು 34 ಸಂಸದರು ಸೋಮವಾರದ ಸಂಸತ್ ಕಲಾಪದಲ್ಲಿ ಗೈರುಹಾಜರಾಗಿದ್ದು, ಪ್ರಶ್ನೋತ್ತರ ಅವಧಿಯನ್ನೇ ರದ್ದು ಪಡಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಸೋಮವಾರದ ಪ್ರಶ್ನೋತ್ತರ ಅವಧಿಯ ವೇಳೆ 28 ಕಾಂಗ್ರೆಸ್ ಸಂಸದರಲ್ಲಿ ಕೇವಲ ಇಬ್ಬರು ಸಂಸದರು ಹಾಜರಿದ್ದರು. ಇದರಿಂದಾಗಿ 'ತಪ್ಪಿತಸ್ಥರ' ವಿರುದ್ಧ ಕಾಂಗ್ರೆಸ್ ಮುಖ್ಯಸ್ಥೆ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಪ್ರಮುಖ ಚರ್ಚೆಯ ವೇಳೆಗೆ ಸಂಸದರು ಹಾಜರಾಗದಿರುವ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುಂಗಾರು ಅಧಿವೇಶನದ ವೇಳೆ ಸೋನಿಯಾ ಗಾಂಧಿ ಅವರು ಪಕ್ಷದ ಸಂಸದರಿಗೆ ಕಲಾಪಗಳಲ್ಲಿ ಹಾಜರಿರುವಂತೆ ನಿರ್ದೇಶನ ನೀಡಿದ್ದರು.
ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಕೇವಲ 34 ಸಂಸದರು ಹಾಜರಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಪೀಕರ್ ಮೀರಾ ಕುಮಾರ್ ಅವರು ಸದನವನ್ನು 30 ನಿಮಿಷಗಳೊಳಗಾಗಿ ಮುಂದೂಡಿದ್ದರು. ಕಳೆದ 20 ವರ್ಷಗಳಲ್ಲಿ ಇಂತಹ ಘಟನೆ ಸಂಭವಿಸಿರುವುದು ಇದೇ ಮೊದಲಾಗಿದೆ.
ಸ್ಪೀಕರ್ ಮೀರಾ ಕುಮಾರ್ ಅವರು ಸಂಸದರ ಈ ಉಪೇಕ್ಷೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 1991ರಲ್ಲಿ ಇದೇ ಕಾರಣಕ್ಕಾಗಿ ಪ್ರಶ್ನೋತ್ತರ ಅವಧಿ ಮುಂದೂಡಲ್ಪಟ್ಟಿತ್ತು. 1983ರಲ್ಲಿ ಎರಡು ಬಾರಿ, 1985ರಲ್ಲಿ ಐದು ಸರ್ತಿ, 1988ರಲ್ಲಿ ಮೂರು ಬಾರಿ ಹಾಗೂ 1989ರಲ್ಲಿ ಎರಡು ಬಾರಿ ಇಂತಹುದೇ ಘಟನೆ ಸಂಭವಿಸಿತ್ತು ಎಂಬುದಾಗಿ ಸಂಸತ್ತಿನ ದಾಖಲೆಗಳು ತೋರುತ್ತವೆ.