ನಿಷೇಧಿತ ಸಂಘಟನೆಯಾಗಿರುವ ಅಸ್ಸಾಂ ಸಂಯುಕ್ತ ಮುಕ್ತಿ ರಂಗದ (ಉಲ್ಫಾ) ಅಧ್ಯಕ್ಷ ಅರವಿಂದ ರಾಜ್‌ಕೋವಾನನ್ನು ಬಾಂಗ್ಲಾದೇಶದಲ್ಲಿ ಬಂಧಿಸಲಾಗಿದ್ದು, ಆತನನ್ನು ಭಾರತಕ್ಕೆ ಕರೆತರುವ ಪ್ರಯತ್ನಗಳು ನಡೆದಿವೆ ಎಂಬುದಾಗಿ ಗುಪ್ತಚರ ಮೂಲಗಳು ಬುಧವಾರ ತಿಳಿಸಿವೆ.
53ರ ಹರೆಯದ ರಾಜ್‌ಕೋವಾನನ್ನು ಸೋಮವಾರ ಢಾಕಾದಲ್ಲಿ ಬಂಧಿಸಲಾಗಿದ್ದು, ಭಾರತ- ಬಾಂಗ್ಲ ಗಡಿ ಪ್ರದೇಶವಾಗಿರುವ ತ್ರಿಪುರಾ ಇಲ್ಲವೇ ಅಸ್ಸಾಂನಲ್ಲಿ ಆತನನ್ನು ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂಬುದಾಗಿ ಅವರು ಹೇಳಿದ್ದಾರೆ.
ಈತನ ಬಂಧನವನ್ನು ಕೇಂದ್ರ ಗೃಹ ಸಚಿವಾಲಯ ದೃಢಪಡಿಸಿದ್ದರೂ, ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದೆ.
ಇದೇವೇಳೆ, ಉಲ್ಫಾದ ಪ್ರಚಾರ ಕಾರ್ಯದರ್ಶಿ ಅಪೂರ್ವ ಬರುವಾ ಸಹ ಬಾಂಗ್ಲ ಪೊಲೀಸರ ಬಂಧನಕ್ಕೀಡಾಗಿರುವುದಾಗಿ ವರದಿಗಳು ತಿಳಿಸಿವೆ. ಉಲ್ಫಾ ಅಧ್ಯಕ್ಷನ ವಿರುದ್ಧ ಇಂಟರ್‌ಪೋಲ್ ಇದೀಗಾಗಲೇ ರೆಡ್‌ಕಾರ್ನರ್ ನೋಟೀಸು ನೀಡಿದೆ.
ಬಂಧಿತ ರಾಜ್‌ಕೋವಾ ಕೇಂದ್ರದೊಂದಿಗಿನ ಮಾತುಕತೆಗೆ ಒಲವು ಸೂಚಿಸಿದ್ದ ಎಂದು ಹೇಳಲಾಗಿದೆ.