ಕಳೆದ ವರ್ಷದ ಬೆಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರರಿಬ್ಬರನ್ನು ಮೇಘಾಲಯ ಗಡಿಯಲ್ಲಿ ಗಡಿ ಭದ್ರತಾ ಪಡೆ ಬಂಧಿಸಿದೆ. ಬಾಂಗ್ಲಾ ಹಾಗೂ ಭಾರತದ ಗೃಹ ಕಾರ್ಯದರ್ಶಿಗಳ ಇತ್ತೀಚಿನ ವರದಿಗಳ ಪ್ರಕಾರ ಲಷ್ಕರೆಯ ಇಬ್ಬರು ಉಗ್ರರನ್ನು ಮೇಘಾಲಯ ಗಡಿಯಲ್ಲಿ ಬಿಎಸ್ಎಫ್ ಸಿಬ್ಬಂದಿಗಳು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ 2008ರ ಜುಲೈ 25ರಂದು ನಡೆಸಲಾಗಿದ್ದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಸೀರ್ ಹಾಗೂ ಶಫಕ್ ಎಂಬಿಬ್ಬರು ಪ್ರಮುಖ ಶಂಕಿತರು ಬಂಧನಕ್ಕೀಡಾಗಿದ್ದಾರೆ. ಬೆಂಗಳೂರಿನ ವಿವಿಧೆಡೆಯಲ್ಲಿ ಉಗ್ರರು ಒಂಬತ್ತು ಕಡೆಗಳಲ್ಲಿ ಬಾಂಬ್ ಸ್ಫೋಟ ನಡೆಸಿದ್ದು, ಇದರಲ್ಲಿ ಮಹಿಳೆಯೊಬ್ಬಾಕೆ ಸಾವನ್ನಪ್ಪಿದ್ದು, ಇತರ ಹಲವರು ಗಾಯಗೊಂಡಿದ್ದರು. ಈ ಸ್ಫೋಟದಲ್ಲಿ ನಸೀರ್ ಹಾಗೂ ಶಫಕ್ ಇಬ್ಬರೂ ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ಶಂಕಿಸಲಾಗಿದೆ.
ಬೆಂಗಳೂರು ಸ್ಫೋಟದ ಬಳಿಕ ಅಹಮದಾಬಾದಿನಲ್ಲಿ ಮತ್ತೊಂದು ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಇಬ್ಬರನ್ನು ಇದೀಗ ಬಂಧಿಸಲಾಗಿದೆ. ಇದಕ್ಕೂ ಮುಂಚಿತವಾಗಿ ಬಾಂಗ್ಲಾದ ಢಾಕಾದಲ್ಲಿ ಉಲ್ಫಾ ಅಧ್ಯಕ್ಷ ಅರವಿಂದ ರಾಜ್‌ಕೋವಾ ಬಾಂಗ್ಲಾ ಪೊಲೀಸರಿಗೆ ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ. ಆತನನ್ನು ಭಾರತಕ್ಕೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ರಾಜ್‌ಕೋವಾಗೆ ಉಲ್ಫಾ ಕಮಾಂಡರ್ ಪರೇಶ್ ಬರುವಾ ಜತೆ ಉಂಟಾಗಿರುವ ವೈಮನಸ್ಯದ ಹಿನ್ನೆಲೆಯಲ್ಲಿ ಆತ ಶರಣಾಗಿದ್ದಾನೆ ಎಂದು ಹೇಳಲಾಗಿದೆ.