ಸರ್ಕಾರಿ ನಿವಾಸದ ಬದಲು ಐಶಾರಾಮಿ ಹೋಟೆಲ್‌ನಲ್ಲಿ ಠಿಕಾಣಿ ಹೂಡಿದ್ದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮತ್ತು ವಿದೇಶಾಂಗ ರಾಜ್ಯ ಸಚಿವ ಶಶಿ ತರೂರ್ ಅವರ ವೆಚ್ಚವನ್ನು ಕೇಂದ್ರ ಸರ್ಕಾರ ಪಾವತಿ ಮಾಡಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಸಚಿವರ ಐಶಾರಾಮಿ ಹೋಟೆಲ್ ವಾಸ್ತವ್ಯ ಪ್ರಕರಣ ರಾಜಕೀಯ ವಲಯದಲ್ಲಿ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ ಸಚಿವರು ತಮ್ಮ ಖರ್ಚು-ವೆಚ್ಚವನ್ನು ತಾವೇ ಭರಿಸಿರುವುದಾಗಿ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡುವ ಮೂಲಕ ವಿವಾದ ಅಂತ್ಯ ಕಂಡಂತಾಗಿದೆ.
ಸಚಿವರ ಐಶಾರಾಮಿ ವಾಸ್ತವ್ಯ ಹೂಡಿಕೆ ಬಗ್ಗೆ ನ್ಯಾಯವಾದಿ ವಿವೇಕ್ ಗರ್ಗ್ ಎಂಬುವರು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದಕ್ಕೆ ವಿದೇಶಾಂಗ ಇಲಾಖೆ ಈ ಸತ್ಯಾಂಶವನ್ನು ಬಿಚ್ಚಿಟ್ಟಿದೆ.
ಎಸ್.ಎಂ.ಕೃಷ್ಣ ಮತ್ತು ಶಶಿ ತರೂರ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಂದರ್ಭದಲ್ಲಿ ಸರ್ಕಾರಿ ನಿವಾಸ ದೊರೆತಿರಲಿಲ್ಲವಾಗಿತ್ತು. ಆ ಕಾರಣದಿಂದ ಸಚಿವದ್ವಯರು ತಮ್ಮ ಸ್ವಂತ ವೆಚ್ಚದಿಂದಲೇ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಇಲಾಖೆ ವಿವರಣೆ ನೀಡಿದೆ.