ಬಲೂಚಿಸ್ತಾನದಲ್ಲಿ ಸಕ್ರಿಯವಾಗಿರುವ ಪ್ರತ್ಯೇಕತಾವಾದಿ ಉಗ್ರಗಾಮಿಗಳಿಗೆ ಭಾರತ ಬೆಂಬಲ ನೀಡುತ್ತಿದೆ ಎಂಬ ಕುರಿತು ಸುಳ್ಳು ಸಾಕ್ಷ್ಯ ಸೃಷ್ಟಿಸುತ್ತಿದೆ ಎಂದು ಪಾಕಿಸ್ತಾನದ ಮೇಲೆ ಆರೋಪಿಸಿದ ಭಾರತ, ಈ ಬಗ್ಗೆ ಪಾಕ್ ವಿದೇಶಾಂಗ ಸಚಿವರು ನೀಡಿದ ಎರಡು ಹೇಳಿಕೆಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ ಎಂದು ಹೇಳಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಾತನಾಡುತ್ತಿದ್ದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಪಾಕಿಸ್ತಾನವು ಶಾಂತಿಯಿಂದ, ನೆಮ್ಮದಿಯಿಂದ ಇರುವುದು ಭಾರತದ ಹಿತಾಸಕ್ತಿಯಿಂದ ಒಳ್ಳೆಯದು ಎಂದು ಈಗಾಗಲೇ ಪ್ರಧಾನಿ ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ನಾವು ಇದಕ್ಕೆ ಬದ್ಧರಾಗಿದ್ದೇವೆ ಎಂದು ಅವರು ಖಚಿತಪಡಿಸಿದರು.
26/11ರ ಮುಂಬೈ ದಾಳಿಯ ಸಂಚುಕೋರರ ಮೇಲೆ ಪಾಕಿಸ್ತಾನವು ಒಂದಿಷ್ಟಾದರೂ ಪಾರದರ್ಶಕ ಕ್ರಮ ಕೈಗೊಳ್ಳುವವರೆಗೂ ಭಾರತವು ಅದರೊಂದಿಗೆ ಸಮಗ್ರ ಮಾತುಕತೆ ಪ್ರಕ್ರಿಯೆಯನ್ನು ಪುನರಾರಂಭಿಸುವುದಿಲ್ಲ ಎಂದು ಕೃಷ್ಣ ಮಗದೊಮ್ಮೆ ಸ್ಪಷ್ಟಪಡಿಸಿದರು.