ಬಿಹಾರಿಗಳ ಕುರಿತು ದ್ವೇಷ-ಭಾಷಣ ನಡೆಸಿದ ಆರೋಪದಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಸ್ಥಾಪಕ ರಾಜ್ ಠಾಕ್ರೆ ವಿರುದ್ಧ ಬಿಹಾರದ ನ್ಯಾಯಾಲಯವೊಂದು ಜಾಮೀನುರಹಿತ ಬಂಧನದ ವಾರಂಟ್ ಜಾರಿಗೊಳಿಸಿದೆ.
2010ರ ಜನವರಿ 4ರೊಳಗೆ ರಾಜ್ ಠಾಕ್ರೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಡುಸುವಂತೆ ಮುಂಬೈ ಪೊಲೀಸ್ ಕಮಿಷನರ್‌ಗೆ ಮುಜಾಫರ್‌ಪುರ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಸಾಹೇಬ್ ಕೌಶರ್ ಅವರು ಸೂಚಿಸಿದ್ದಾರೆ.
ಈ ಹಿಂದೆ ಹಲವಾರು ಬಾರಿ ನಿರ್ಧರಿಸಲಾದ ದಿನಾಂಕಗಳಂದು ವೈಯಕ್ತಿಕವಾಗಿ ಇಲ್ಲವೇ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗಲು ರಾಜ್ ಠಾಕ್ರೆ ವಿಫಲರಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ರಾಜ್ ಠಾಕ್ರೆ ವಿರುದ್ಧ ಕಾನೂನು ಕ್ರಮ ಕೋರಿ ಸ್ಥಳೀಯ ವಕೀಲ ಸುಧೀರ್ ಓಝಾ ಎಂಬವರು ಅರ್ಜಿ ಸಲ್ಲಿಸಿದ್ದರು. 2008ರ ಜನವರಿ 31ರಂದು ಠಾಕ್ರೆ ಅವರು ಬಿಹಾರಿಗಳ ವಿರುದ್ಧ ಅವಮಾನಕರ ದ್ವೇಷ ಭಾಷಣ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಮಾತ್ರವಲ್ಲದೆ, ಛಾತ್ ಹಬ್ಬವನ್ನೂ ಠಾಕ್ರೆ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.