26/11ರ ಮುಂಬೈ ಉಗ್ರರ ದಾಳಿಯ ನಂತರ ಗುಜರಾತ್ ಮೇಲೆ ಉಗ್ರರ ಕಣ್ಣು ನೆಟ್ಟಿದ್ದು, ಸಧ್ಯಕ್ಕೆ ಗುಜರಾತ್ ಭಯೋತ್ಪಾದನಾ ಬೆದರಿಕೆ ಎದುರಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಾರೆ.
26/11ರ ದಾಳಿಯ ನಂತರ ಕರಾವಳಿ ಪ್ರದೇಶಕ್ಕೆ ಹೆಚ್ಚಿನ ಉಗ್ರರ ಬೆದರಿಕೆಯಿದೆ. ಗುಜರಾತ್ ದೇಶದಲ್ಲಿ ಅತೀ ಉದ್ದದ ಕರಾವಳಿ ಹೊಂದಿರುವ ರಾಜ್ಯವಾಗಿದ್ದು, ಇದೊಂದೇ 1,640 ಕಿಮೀ ಉದ್ದದ ಕರಾವಳಿಯನ್ನು ಹೊಂದಿದೆ. ಅಷ್ಟೇ ಅಲ್ಲ, ಇದು ಪಾಕಿಸ್ತಾನಕ್ಕೆ ತೀರಾ ಹತ್ತಿರದಲ್ಲೂ ಇದೆ. ಹಾಗಾಗಿ ಉಗ್ರರ ಕಣ್ಣು ಗುಜರಾತ್ ಮೇಲಿರುವುದು ಸ್ಪಷ್ಟ ಎಂದು ಗುಜರಾತ್ ಪೊಲೀಸ್ ಅಕಾಡೆಮಿಯ ಜಂಟಿ ನಿರ್ದೇಶಕ ವಿನೋದ್ ಮಾಲ್ ಹೇಳಿದ್ದಾರೆ.
ಕರಾವಳಿ ಹಾಗೂ ಗಡಿ ಭದ್ರತೆಯ ಬಗೆಗಿನ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 1993ರ ಮುಂಬೈ ಸರಣಿ ಸ್ಫೋಟದಲ್ಲಿ ಬಳಸಿದ ಸ್ಫೋಟಕಗಳೆಲ್ಲವೂ ಗುಜರಾತ್‌ನ ಕರಾವಳಿ ಪ್ರದೇಶದಲ್ಲಿ ತಯಾರಾದವುಗಳು. ಅಷ್ಟೇ ಅಲ್ಲ, ಮುಂಬೈಗೆ ಬರಲು ಭಯೋತ್ಪಾದಕರು ಗುಜರಾತ್ ದೋಣಿಯನ್ನೂ ಬಳಸಿದ್ದರು ಹಾಗೂ ಸಮುದ್ರದ ಮೂಲಕ ಗುಜರಾತ್ ಕರಾವಳಿಗೆ ಬಂದಿಳಿದಿದ್ದರು. ಗುಜರಾತ್‌ನಲ್ಲಿ ಭಾರೀ ಶಸ್ತ್ರಾಸ್ತ್ರಗಳು, ಖೋಟಾ ನೋಟು, ಸ್ಫೋಟಕಗಳು, ಡ್ರಗ್ಸ್ ಮುಂತಾದವುಗಳ ದಂಧೆಯೇ ಹಿಂದೆ ನಡೆಯುತ್ತಿದ್ದುದು ಬೆಳಕಿಗೆ ಬಂದಿದೆ ಎಂದು ತಮ್ಮ ವಾದಕ್ಕೆ ಪುಷ್ಠಿ ನೀಡಿದರು.