ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಿಬರ್ಹಾನ್ ವರದಿಯ ಹಂಗಿಲ್ಲದ ಅಯೋಧ್ಯೆಯಲ್ಲಿ ಪ್ರಶಾಂತ (Ayodhya | Babri Masjid | Ram Mandir | Dec 6 | Liberhan Commission Report)
Bookmark and Share Feedback Print
 
ಲಿಬರ್ಹಾನ್ ಆಯೋಗದ ವರದಿಯು ದಿಲ್ಲಿಯ ಅಧಿಕಾರದ ಹಜಾರದಲ್ಲಿ ಭಾರೀ ಸದ್ದು ಮಾಡುತ್ತಿರಬಹುದು. ಮತ್ತು ಬಾಬರನ ಮಸೀದಿಯ ಧ್ವಂಸ ಪ್ರಕರಣದ 17ನೇ ವಾರ್ಷಿಕ ಡಿಸೆಂಬರ್ 6ರಂದು ನಡೆಯುತ್ತಿರುವುದರಿಂದ ಸಕಲ ಸಿದ್ಧತೆಗಳೂ ನಡೆಯುತ್ತಿವೆ. ಆದರೆ, ಅಯೋಧ್ಯೆಯಲ್ಲಿ ಸ್ಥಿತಿ ಹೇಗಿದೆ? ಏನಿಲ್ಲ, ಅಯೋಧ್ಯೆ ಶಾಂತವಾಗಿದೆ.

ಅಯೋಧ್ಯೆಯ ಮಡಿಲಲ್ಲಿ ಜೀವನ ಹಾಗೇ ಸಾಗಿದೆ. ಅಲ್ಲಿ ಕಲ್ಲುಗಳ ಕೆತ್ತನೆ ಕಾರ್ಯ ಸಾಗಿದೆ. ಬಾಬರಿ ಮಸೀದಿಯ ಅವಶೇಷಗಳ ಬಳಿಯಲ್ಲಿ ಈಗ ತಾತ್ಕಾಲಿಕ ರಾಮ ಮಂದಿರ ಇರುವ ಸ್ಥಳದಲ್ಲಿಯೇ ಪ್ರಸ್ತಾಪಿತ ಭರ್ಜರಿ ರಾಮ ಮಂದಿರ ನಿರ್ಮಾಣಕ್ಕಾಗಿ ಶಿಲ್ಪಿಗಳು ಕಲ್ಲುಗಳಿಗೆ ರೂಪ ನೀಡುತ್ತಿದ್ದಾರೆ.

ಪ್ರಸ್ತಾಪಿತ ಎರಡು ಮಹಡಿಗಳ ಮಂದಿರದ ನೆಲಮಹಡಿಗಾಗುವಷ್ಟು ಕಲ್ಲುಗಳ ಕೆತ್ತನೆ ಕಾರ್ಯವು 2005ರಲ್ಲೇ ಪೂರ್ಣಗೊಂಡಿದೆ. ಅದನ್ನು ಅಳವಡಿಸಲು ಕಾಯುತ್ತಿದ್ದೇವೆ ಎನ್ನುತ್ತಾರೆ ಈ ಶಿಲ್ಪಕುಟೀರದ ವ್ಯವಸ್ಥಾಪಕ ಅನುಭಾಯಿ ಸೋನ್ಪುರ ಅವರು.

ಮೊದಲ ಮಹಡಿಯ ಕಂಬಗಳೂ ಸಿದ್ಧವಾಗಿವೆ. ಚಾವಣಿ ಮತ್ತು ಗೋಪುರದ ಉಳಿದ ಭಾಗವನ್ನು ಮಂದಿರ ನಿರ್ಮಾಣವಾಗುವ ಸ್ಥಳದಲ್ಲಿಯೇ ಮಾಡಬೇಕಾಗುತ್ತದೆ. ಆದರೆ ಪ್ರಸ್ತಾಪಿತ ಮಂದಿರ ನಿರ್ಮಾಣಕ್ಕೆ ಔಪಚಾರಿಕವಾಗಿ ಅನುಮತಿ ದೊರೆಯುವವರೆಗೂ ಅದು ಸಾಧ್ಯವಾಗಲಾರದು ಎಂದು ಸ್ಥಳೀಯ ವಿಶ್ವ ಹಿಂದು ಪರಿಷತ್ ಘಟಕದ ಮುಖ್ಯಸ್ಥ ಶರದ್ ಶರ್ಮಾ ಹೇಳಿದ್ದಾರೆ.

ಸುಮಾರು 15 ಸಾವಿರ ಚದರಡಿ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಶಿಲ್ಪಕುಟೀರದಲ್ಲಿ ಧೋಲ್ಪುರದ ನಸುಗುಲಾಬಿವರ್ಣದ ಶಿಲೆಕಲ್ಲುಗಳನ್ನು ಶಿಸ್ತಾಗಿ ಜೋಡಿಸಲಾಗಿದೆ. ಅನತಿ ದೂರದಲ್ಲಿರುವ ಇಷ್ಟೇ ವಿಸ್ತೀರ್ಣದ ಹೆಚ್ಚುವರಿ ಸ್ಥಳದಲ್ಲಿ ಕೂಡ ಬಗೆ ಬಗೆಯ ಕಂಬಗಳು, ಶಿಲೆಕಲ್ಲುಗಳನ್ನು ಜೋಡಿಸಿಡಲಾಗಿದೆ.

ಕಲ್ಲು ಕೆತ್ತುವ ವಿಶೇಷ ಗರಗಸ ಯಂತ್ರಗಳ ಅಬ್ಬರ, ಸುತ್ತಿಗೆ-ಉಳಿ ಪೆಟ್ಟಿನ ಕಿಟಿಕಿಟಿ ಸದ್ದು ಮುಂತಾದವುಗಳಿಂದ ಕೆಲವೇ ವರ್ಷಗಳವರೆಗೂ ಭಾರೀ ಶಬ್ದದ ತಾಣವಾಗಿದ್ದ ಅಯೋಧ್ಯೆ ಪ್ರದೇಶ, ಇದೀಗ ಅಸಹಜವೋ ಎಂಬಂತೆ ಶಾಂತವಾಗಿದೆ. ಇಲ್ಲಿ ಈ ಯಂತ್ರಗಳ ಸದ್ದೇನೂ ಕೇಳಿಬರುತ್ತಿಲ್ಲ.

ವಿಶೇಷವೆಂದರೆ, ಕಲ್ಲುಗಳಿಂದನೇ ನಿರ್ಮಿಸಲು ಉದ್ದೇಶಿಸಿರುವ ಈ ಮಂದಿರ ನಿರ್ಮಾಣ ಕಾರ್ಯದಲ್ಲಿ ಸಿಮೆಂಟ್ ಗಾರೆ ಬಳಸದಿರಲು ನಿರ್ಧರಿಸಲಾಗಿದೆ. ಭಾರಿ ಕಂಬಗಳನ್ನು ಕೂಡ ಜೋಡಿಸಿಯೇ ಇಡಲಾಗುತ್ತದೆ.

ಅಯೋಧ್ಯೆಯ ಗಲ್ಲಿಗಳಲ್ಲಿ ಕೂಡ ಜೀವನ ಎಂದಿನಂತೆಯೇ ಮುಂದುವರಿದಿದೆ. ಇಲ್ಲಿ ಡಿಸೆಂಬರ್ 6 ಎಂಬುದು ಕೇವಲ ಒಂದು ದಿನ ಮಾತ್ರ. ಯಾವುದೇ ಭಾವನೆಗಳು ಅಲ್ಲಿಲ್ಲ. ಬಾಬರಿ ಮಸೀದಿ ಧ್ವಂಸವಾದದ್ದನ್ನು ವಿಹಿಂಪ 'ಶೌರ್ಯ ದಿವಸ' ಎಂದೂ, ಬಾಬರಿ ಮಸೀದಿ ಕ್ರಿಯಾ ಸಮಿತಿಯು 'ಕರಾಳ ದಿನ' ಎಂದೂ ಆಚರಿಸುತ್ತಿತ್ತಾದರೂ, ಇದೀಗ ಅದರ ಬಿಸಿ ತಗ್ಗಿದೆ. ಕಳೆದ ಕೆಲವು ವರ್ಷಗಳಿಂದ ಅದೊಂದು ಸಂಪ್ರದಾಯ ಮಾತ್ರವಾಗಿ ಉಳಿದಿದ್ದು, ಈ ಆಚರಣೆಗಳಲ್ಲಿ ಒಂದಷ್ಟು ಬೆರಳೆಣಿಕೆ ಜನರು ಮಾತ್ರವೇ ಭಾಗವಹಿಸುತ್ತಾರೆ.

ಈ ಬಾರಿಯೂ ಏನೂ ವಿಶೇಷ ಇರಲಾರದು. ಲಿಬರ್ಹಾನ್ ಆಯೋಗದ ವರದಿ ಅಯೋಧ್ಯೆ ನಿವಾಸಿಗಳಿಗೆ ಮಹತ್ವದ್ದಲ್ಲ. ತೊಂದರೆ ಉಂಟುಮಾಡಲು ಮತ್ತು ಜನರನ್ನು ಪ್ರಚೋದಿಸಲು ಈ ಪಟ್ಟಣದೊಳಗೆ ಹೊರಗಿರು ಬಾರದಂತೆ ತಡೆಯೊಡ್ಡುವವರೆಗೂ, ಈ ನಗರವು ತನ್ನದೇ ಆದ ರೀತಿಯಲ್ಲಿ ಶಾಂತವಾಗಿ ಮುಂದುವರಿಯಲು ಬಯಸುತ್ತದೆ ಎನ್ನುತ್ತಾರೆ ಅಯೋಧ್ಯೆಯ ವ್ಯಾಪಾರಿ ಸುಫಲ್ ಕುಮಾರ್.

ತಾತ್ಕಾಲಿಕ ಮಂದಿರಕ್ಕೆ ಬರವವರಿಗಾಗಿ ಪೂಜಾ ಸಾಮಗ್ರಿಗಳನ್ನು ಮಾರುತ್ತಿರುವ ಸರಸ್ವತಿ ದೇವಿ ಎಂಬಾಕೆಗೆ, ಡಿಸೆಂಬರ್ 6 ಎಂದರೆ ಅತ್ಯಂತ ಕಡಿಮೆ ವ್ಯಾಪಾರ ನಡೆಸುವ ದಿನ. ಆ ದಿನ ಪೊಲೀಸ್ ಭದ್ರತೆ ಹೆಚ್ಚಿರುವುದರಿಂದಾಗಿ ಯಾತ್ರಿಗಳ ಆಗಮನ ಕಡಿಮೆ ಇರುತ್ತದೆ ಎನ್ನುತ್ತಾರಾಕೆ.

ಫೈಜಾಬಾದ್ ಎಸ್ಪಿ ಆರ್.ಪಿ.ಎಸ್.ರಾಥೋಡ್ ಅವರ ಪ್ರಕಾರ, ಈ ತಾತ್ಕಾಲಿಕ ಮಂದಿರಕ್ಕೆ ಪ್ರತಿ ದಿನ ಏನಿಲ್ಲವೆಂದರೂ 1ರಿಂದ ಒಂದುವರೆ ಸಾವಿರ ಯಾತ್ರಿಗಳು ಭೇಟಿ ನೀಡುತ್ತಾರೆ. ರಾಮ ನವಮಿಯಂತಹ ವಿಶೇಷ ದಿನಗಳಂದು ಈ ಸಂಖ್ಯೆ ಹೆಚ್ಚಿರುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ