ನನ್ನ ಬಂಧನದ ಸುದ್ದಿ ಶುದ್ಧ ಸುಳ್ಳು: ಉಲ್ಫಾ ಮುಖಂಡ ರಾಜ್‌ಖೋವಾ
ನವದೆಹಲಿ, ಗುರುವಾರ, 3 ಡಿಸೆಂಬರ್ 2009( 15:58 IST )
ತನ್ನ ಬಂಧನವಾಗಿದೆ ಎಂದು ಮಾಧ್ಯಮಗಳಲ್ಲಿ ಬಂದ ವರದಿಗಳು ಶುದ್ಧ ಸುಳ್ಳು ಎಂದು ಉಲ್ಫಾ (ಯುನೈಟೆಡ್ ಲಿಬರೇಶ್ ಫ್ರಂಟ್ ಆಫ್ ಅಸ್ಸಾಂ) ಅಧ್ಯಕ್ಷ ಅರಬಿಂದ ರಾಜ್‌ಖೋವಾ ಹೇಳುವ ಮೂಲಕ ಅವರ ಬಂಧನವೀಗ ಹಲವು ಸಂಶಯಗಳಿಗೆ ಎಡೆಮಾಡಿಸಿದೆ.
ತನ್ನ ಬಂಧನವಾಗಿಯೇ ಇಲ್ಲ. ಇದು ಕೇವಲ ಗೊಂದಲ ಉಂಟು ಮಾಡಲು ಹಬ್ಬಿಸಿರುವ ಸುಳ್ಳು ಸುದ್ದಿ ಹಾಗೂ ಅಸ್ಸಾಂನ ಶಾಂತಿ ಕದಡಲು ಯತ್ನ ಎಂದು ರಾಜ್‌ಖೋವಾ ವ್ಯಾಖ್ಯಾನಿಸಿದ್ದಾರೆ. ತಾನು ಈ ಹಿಂದೆ ಎಲ್ಲಿದ್ದೆನೋ ಅಲ್ಲಿಯೇ ಇದ್ದೇನೆ. ಬಾಂಗ್ಲಾದೇಶದ ಅದೇ ಹಿಂದಿದ್ದ ಸ್ಥಳದಲ್ಲಿ ನಿಂತು ಮಾತಾಡುತ್ತಿದ್ದೇನೆ. ನನ್ನ ಬಂಧನವಾಗಿದೆಯೆಂದು ಹೇಳೋದೆಲ್ಲಾ ಸುಳ್ಳು. ಅಂತಹ ಸುದ್ದಿಗಳಿಗೆ ಸೊಪ್ಪು ಹಾಕಬೇಡಿ. ವೃಥಾ ಗೊಂದಲಗಳನ್ನು ಸೃಷ್ಠಿಸಲು ನೀಡುವಂತಹ ಸುಳ್ಳು ಸುದ್ದಿಗಳು ಅವು ಎಂದು ರಾಜ್‌ಖೋವಾ ಹೇಳಿದರು.
ಉಲ್ಫಾ ಮುಖಂಡ ರಾಜ್‌ಖೋವಾ ಬಂಧನದ ಸುದ್ದಿ ಬುಧವಾರ ಬಹಿರಂಗಗೊಂಡಿತ್ತು. ಅಲ್ಲದೆ, ರಾಜ್‌ಖೋವಾ ತಾನೇ ತಾನಾಗಿ ಅಗರ್ತಲಾದಲ್ಲಿ ಭಾರತೀಯ ರಕ್ಷಣಾ ಪಡೆಗೆ ಶರಣಾಗಿದ್ದಾರೆ ಹಾಗೂ ಅವರನ್ನೀಗ ತ್ರಿಪುರ ಮಾರ್ಗವಾಗಿ ವಿಮಾನದಲ್ಲಿ ದೆಹಲಿಗೆ ಸಾಗಿಸಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ರಾಷ್ಟ್ರೀಯ ರಕ್ಷಣಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರೂ ಕೂಡಾ ರಾಜ್‌ಖೋವಾ ಬಂಧಿತರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಕೇಂದ್ರ ಸರ್ಕಾರದ ಕೆಲವು ಮೂಲಗಳ ಪ್ರಕಾರ, ಬಾಂಗ್ಲಾದೇಶದ ರಕ್ಷಣಾ ಏಜೆನ್ಸಿಗಳು ಉಲ್ಫಾ ಮುಖಂಡ ರಾಜ್‌ಖೋವಾರನ್ನು ಢಾಕಾದ ಸುರಕ್ಷಿತವಾದ ಸ್ಥಳವೊಂದರಲ್ಲಿ ಗುಪ್ತವಾಗಿ ಇರಿಸಲಾಗಿದೆ ಎನ್ನಲಾಗುತ್ತಿದೆ. ಒಟ್ಟಾರೆ, ಉಲ್ಫಾ ಮುಖಂಡರ ಬಂಧನದ ಸುದ್ದಿ ದಿನದಿನವೂ ಹಲವು ತಿರುವುಗಳನ್ನು ಕಾಣುತ್ತಾ ಕುತೂಹಲ ಸೃಷ್ಠಿಸಿದೆ.