'ಪೊಲೀಸರ ಅಜಾಗರೂತಕೆಯಿಂದಾಗಿಯೇ ಉಗ್ರರ ಗುಂಡಿಗೆ ಬಲಿಯಾಗಿರುವ ಹೇಮಂತ್ ಕರ್ಕರೆ ಅವರ ಬುಲೆಟ್ ಪ್ರೂಫ್ ಜಾಕೆಟ್ ನಾಪತ್ತೆಯಾಗಿದೆ' ಎಂದು ತಿಳಿಸಿರುವ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ಈ ಬಗ್ಗೆ ಕರ್ಕರೆ ಪತ್ನಿ ಕವಿತಾ ಕರ್ಕರೆಯ ಕ್ಷಮೆ ಕೋರಿದ್ದಾರೆ.
ಪೊಲೀಸರ ಬೇಜಬ್ದಾರಿತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಗೃಹ ಸಚಿವರು, ಕವಿತಾ ಕರ್ಕರೆಯವರಲ್ಲಿ ಕ್ಷಮೆ ಕೋರಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಕಳೆದ ವರ್ಷ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿ ಸಂದರ್ಭದಲ್ಲಿ ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಅವರು ಬಲಿಯಾಗಿದ್ದರು. ಉಗ್ರರನ್ನು ಸದೆಬಡಿಯಲು ಹೊರಟಾಗ ಕರ್ಕರೆ ಅವರು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರು. ಆದರೆ, ಅವರ ಶವ ಆಸ್ಪತ್ರೆಯಲ್ಲಿರುವಾಗ ಅವರ ಮೇಲೆ ಜಾಕೆಟ್ಟೇ ನಾಪತ್ತೆಯಾಗಿತ್ತು. ಈ ಬಗ್ಗೆ ಕವಿತಾ ಕರ್ಕರೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದಾಗ ಜಾಕೆಟ್ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿತ್ತು. ತದನಂತರ ಮಹಾರಾಷ್ಟ್ರ ಸರ್ಕಾರ ಜಾಕೆಟ್ ನಾಪತ್ತೆ ಬಗ್ಗೆ ತನಿಖೆಗೆ ಆದೇಶಿಸಿತ್ತು.