ನಗರದ ಹೊರವಲಯದಲ್ಲಿ ನಾಲ್ಕು ವರ್ಷದ ಪುಟಾಣಿಯ ಮೇಲೆ ನೆರೆಮನೆಯ ಯುವಕನೊಬ್ಬ ಅತ್ಯಾಚಾರ ಎಸಗಿದ್ದು, ಸ್ಥಳೀಯರು ಆಕ್ರೋಶಭರಿತ ಪ್ರತಿಭಟನೆ ಮಾಡಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.
ಶ್ರೀನಗರದಿಂದ 12 ಕಿ.ಮೀ. ದೂರದಲ್ಲಿರುವ ಬ್ರಾಯಿನ್ ಎಂಬಲ್ಲಿನ ದಾಂಪುರದಲ್ಲಿ ಜರಾಫತ್ ಖಾನ್ ಎಂಬಾತ ಬುಧವಾರ ಮನೆಯಲ್ಲಿ ಒಬ್ಬಳೇ ಇದ್ದ ಈ 4ರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ.
ಸಂಜೆ ತಂದೆ ತಾಯಿ ಮನೆಗೆ ಬಂದ ಬಳಿಕ ಮನೆಯಲ್ಲಿ ಅಳುತ್ತಾ ಕೂತಿದ್ದ ಬಾಲಕಿಯನ್ನು ಪ್ರಶ್ನಿಸಿದಾಗ ವಿಷಯ ಹೊರಬಿದ್ದಿತ್ತು. ನಂತರ ಈ ಬಾಲಕಿಯ ತಂದೆಯು ಸ್ಥಳೀಯ ಪೊಲೀಸರಿಗೆ ದೂರು ನೀಡಿದರು. ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆರೋಪಿ ಜರಾಫತ್ ಖಾನ್ನನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ.
ಕಾನ್ಪುರದಲ್ಲಿ ಯುವಕರಿಬ್ಬರ ಕೃತ್ಯ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಇಬ್ಬರು ಅಪರಿಚಿತ ಯುವಕರು ಅಪ್ರಾಪ್ತ ಬಾಲಕಿಯ ಮೇಲೆ ಆಕ್ರಮಣ ನಡೆಸಿ ಅತ್ಯಾಚಾರ ನಡೆಸಿದ ಘಟನೆ ಗುರುವಾರ ವರದಿಯಾಗಿದೆ. ಬಚಾನ ಹಳ್ಳಿಯಲ್ಲಿ ಈ ಕೃತ್ಯ ನಡೆದಿದ್ದು, 13ರ ಬಾಲಕಿಯು ಗದ್ದೆಗೆ ಹೋಗಿದ್ದ ಸಂದರ್ಭದಲ್ಲಿ ಆಕೆಯನ್ನು ದೂರ ಕರೆದೊಯ್ದು ಇಬ್ಬರು ಅತ್ಯಾಚಾರ ಎಸಗಿದ್ದಾರೆ. ಮಾತ್ರವಲ್ಲದೆ ಕುತ್ತಿಗೆಗೆ ಚಾಕುವಿನಂತ ಹರಿತ ಆಯುಧದಿಂದ ತಿವಿದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಸು ದಾಖಲಿಸಲಾಗಿದೆ.
ಮುಂಬೈಯಲ್ಲಿ 4ರ ಬಾಲೆಗೆ ಕಿರುಕುಳ ನೀಡಿದ 62ರ ಅಜ್ಜ ಬುಧವಾರ ಮುಂಬೈಯಲ್ಲಿಯೂ ಇದೇ ರೀತಿಯ ಘಟನೆಯೊಂದು ವರದಿಯಾಗಿದ್ದು, ನಿರ್ಮಲ ನಗರ ವ್ಯಾಪ್ತಿಯಲ್ಲಿ 62ರ ವೃದ್ಧನೊಬ್ಬ, 4ರ ಬಾಲೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತನಾಗಿದ್ದಾನೆ.
ಕೊಠಡಿಗೆ ಬಂದರೆ ಚಾಕಲೇಟು ನೀಡುವ ಆಮಿಷವೊಡ್ಡಿದ ನೆರೆಮನೆಯ ಈ ವೃದ್ಧ, ಚಾಕಲೇಟು ಆಸೆಗೆ ಬಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಎಂದು ದೂರು ನೀಡಲಾಗಿದೆ.
ದೇಶದ ವಿವಿಧೆಡೆ ಏನೂ ಅರಿಯದ ಮುಗ್ಧ ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಸಮಾಜದ ನೈತಿಕತೆ ಯಾವ ಹಂತ ತಲುಪಿದೆ ಎಂದು ಚಿಂತಿಸಲು ಇದು ಸಕಾಲ.