ಬಾಂಗ್ಲಾದೇಶವು ಬಂಧಿಸಿ ಭಾರತಕ್ಕೊಪ್ಪಿಸಿರುವ ಇಬ್ಬರು ಲಷ್ಕರ್-ಇ-ತೋಯ್ಬಾ ಉಗ್ರಗಾಮಿಗಳು, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ತಾನು ರಹೀಂ ಎಂಬಾತನ ಜೊತೆಗೆ ಸೇರಿಕೊಂಡು ಬೆಂಗಳೂರಿನ ವಿವಿಧೆಡೆ ಬಾಂಬ್ ಇರಿಸಿದ್ದುದಾಗಿ ಬಂಧಿತರಲ್ಲೊಬ್ಬನಾದ ನಜೀರ್ ತರಿಯಾನ್ ದಬೆದೆ (25) ತಿಳಿಸಿದ್ದಾನೆ. ಬಾಂಬ್ ತಜ್ಞನೂ ಆಗಿರುವ ನಜೀರ್ ಮತ್ತು ಇನ್ನೊಬ್ಬ ಲಷ್ಕರ್ ಭಯೋತ್ಪಾದಕ ಸಿರಾಜ್ ಶಂಸುದ್ದೀನ್ ಶಮಾಸ್ (33) ಇವರಿಬ್ಬರೂ ಕೇರಳದವರು. ಇವರಿಬ್ಬರನ್ನೂ ಬಾಂಗ್ಲಾದೇಶದ ಗಡಿಭದ್ರತಾ ಪಡೆಯು ಬುಧವಾರ ಮೇಘಾಲಯ ಪೊಲೀಸರಿಗೆ ಒಪ್ಪಿಸಿತ್ತು. ಭಾರತದ ಗಡಿಭದ್ರತಾ ಪಡೆ ನೀಡಿದ ಸುಳಿವಿನ ಆಧಾರದಲ್ಲಿ ಬಾಂಗ್ಲಾದೇಶ ರೈಫಲ್ಸ್ (ಬಿಡಿಆರ್) ಈ ಬಂಧನ ಮಾಡುವಲ್ಲಿ ಯಶಸ್ವಿಯಾಗಿತ್ತು.
ಆದರೆ 2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೇಲೆ ನಡೆಸಿದ ದಾಳಿಯಲ್ಲಿ ಭಾಗಿಯಾಗಿರುವ ಬಗ್ಗೆ ಬಾಯಿ ಬಿಟ್ಟಿಲ್ಲ.
ಕಳೆದೊಂದು ವರ್ಷದಿಂದ ಬಾಂಗ್ಲಾದೇಶದಲ್ಲೇ ತಲೆಮರೆಸಿಕೊಂಡಿದ್ದ ನಜೀರ್ ಮತ್ತು ಶಂಸುದ್ದೀನ್ ದಕ್ಷಿಣ ಭಾರತದ ಲಷ್ಕರ್ ನೆಲೆಗಳ ಬಗ್ಗೆ ತನಿಖೆ ಸಂದರ್ಭ ಬಾಯಿ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ಯಾವುದನ್ನೂ ಬಹಿರಂಗಪಡಿಸಿಲ್ಲ.
ಕರ್ನಾಟಕದಲ್ಲಿ ಸಿಮಿ ಜಾಲವಿನ್ನೂ ಸಕ್ರಿಯವಾಗಿರುವುದಕ್ಕೆ ಪುರಾವೆಯೆಂಬಂತೆ ಕಳೆದ ವರ್ಷದ ಫೆಬ್ರವರಿಯಲ್ಲಿ ಕೇರಳದ ಮತ್ತೊಬ್ಬ ಉಗ್ರಗಾಮಿ ಮೊಹಮದ್ ಯಾಹ್ಯಾ ಕಮ್ಮುಕುಟ್ಟಿ (31) ಎಂಬಾತನ ಬಂಧನದ ವೇಳೆ ನಜೀರ್ ಹೆಸರು ಬಯಲಾಗಿತ್ತು.
ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಬಳಿಕ ಇನ್ನೂ ಐವರು ಯುವಕರು ಲಷ್ಕರ್‌ನ 5 ತಿಂಗಳ ಭಯೋತ್ಪಾದನಾ ತರಬೇತಿಗಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿದ್ದಾರೆ. ಅವರಲ್ಲಿ ನಾಲ್ವರು ಸೇನಾಪಡೆಗಳಿಗೆ ಬಲಿಯಾಗಿದ್ದರೆ, ಉಳಿದವನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಬಂಧಿತರು ಹೇಳಿದ್ದಾರೆನ್ನಲಾಗಿದೆ.
ಯುಎಇ, ಖತಾರ್ ಮತ್ತು ಬಹರೈನ್‌ಗಳಲ್ಲಿಯೂ ತಮ್ಮ ಲಷ್ಕರ್ ಜಾಲ ಹರಡಿರುವ ಬಗ್ಗೆಯೂ ಈ ಉಗ್ರರು ಬಾಯಿ ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಬೆಂಗಳೂರು ಪೊಲೀಸರ ತಂಡವೊಂದು ಶಿಲ್ಲಾಂಗ್‌ಗೆ ತೆರಳಿದೆ.
ಇವರಿಬ್ಬರೊಂದಿಗೆ ಲಷ್ಕರ್ ಕಮಾಂಡರ್ ಒಬ್ಬಾತ ಸಂಪರ್ಕದಲ್ಲಿದ್ದು, ಬಂಧಿತರು ಪಾಕಿಸ್ತಾನದ ಐಎಸ್ಐ ನಿರ್ದೇಶನದ ಅನುಸಾರ ಲಷ್ಕರ್‌ಗೆ ಯುವಕರ ಸೇರ್ಪಡೆಯ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.