ರಾಷ್ಟ್ರೀಯ ರಾಜಧಾನಿಯಲ್ಲಿರುವ ಶೇ.96ರಷ್ಟು ಮಹಿಳೆಯರಿಗೆ ತಾವು ಸುರಕ್ಷಿತ ತಾಣದಲ್ಲಿ ವಾಸಿಸುತ್ತಿದ್ದೇವೆ ಎಂಬ ಭಾವನೆಯಿಲ್ಲ. ಲೈಂಗಿಕ ಶೋಷಣೆಯೇ ಇವರುಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆ. ಕೆಲವರು ಬಾಯ್ಬಿಟ್ಟು ಹೇಳಿದರೆ, ಉಳಿದವರು ಉಗುಳು ನುಂಗುತ್ತಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಸೆಂಟರ್ ಫಾರ್ ಈಕ್ವಿಟಿ ಎಂಡ್ ಇನ್‌ಕ್ಲೂಶನ್ (ಸೀಕ್ವೆನ್) ಮತ್ತು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಜಂಟಿಯಾಗಿ ನಡೆಸಿದ ಸಮೀಕ್ಷೆ ಪ್ರಕಾರ ದೆಹಲಿಯ ಪ್ರಖ್ಯಾತ ಮಾರುಕಟ್ಟೆಗಳಾದ ಚಾಂದ್ನಿ ಚೌಕ್, ಕನಾಟ್ ಪ್ಲೇಸ್, ಕರೋಲ್ ಬಾಗ್ ಪ್ರದೇಶಗಳು ಮತ್ತು ಬಸ್ಸುಗಳಲ್ಲಿ ಮಹಿಳೆಯರು ಸಂಚರಿಸುವುದೇ ಕಷ್ಟವಾಗಿದೆ.
ದೆಹಲಿಯ ಶೇ.96ರಷ್ಟು ಮಹಿಳೆಯರು ನಗರ ವಾಸ ತೀರಾ ಸುರಕ್ಷಿತವೇನಲ್ಲ ಎಂದು ಅಭಿಪ್ರಾಯಪಟ್ಟರೆ, ಶೋಷಣೆಗೊಳಗಾದ ಶೇ.44ರಷ್ಟು ಮಹಿಳೆಯರು ಘಟನೆಗಳು ನಡೆದ ನಂತರ ಮೌನರಾಗಿ ಬಿಡುತ್ತಾರೆ ಎಂದು ಸೀಕ್ವೆನ್ ನಿರ್ದೇಶಕಿ ಹಾಗೂ ಸಹ ಸಂಸ್ಥಾಪಕಿ ಲೋರಾ ಪ್ರಭು ವಿವರಿಸುತ್ತಾರೆ.
ದೆಹಲಿಯ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕವಾಗಿ ಚುಡಾಯಿಸುವುದು ಅಥವಾ ಹಿಂಸಿಸುವುದು ಸಾಮಾನ್ಯ ವಿಚಾರವಾಗಿ ಹೋಗಿದೆ. ಇದರಲ್ಲಿ ವೈಯಕ್ತಿಕ ಆರ್ಥಿಕ ಸ್ಥಿತಿಯ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.
ನವದೆಹಲಿ ಮತ್ತು ಹಳೆ ದೆಹಲಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ವಾಸಿಸುತ್ತಿರುವ 12ರಿಂದ 55 ವರ್ಷಗಳವರೆಗಿನ 630 ಮಹಿಳೆಯರ ಹೇಳಿಕೆಗಳನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
10ರೊಳಗಿನ ಹುಡುಗಿಯರು ಲೈಂಗಿಕ ಶೋಷಣೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಶೇ.60ರಷ್ಟು ಮಹಿಳೆಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಷ್ಟ್ರ ರಾಜಧಾನಿಯ ಸಾರ್ವಜನಿಕ ಬಸ್ಸುಗಳಲ್ಲಿ ಪ್ರಯಾಣಿಸುವುದೆಂದರೆ ಒಂಚೂರೂ ಸುರಕ್ಷತೆಯನ್ನು ಅನುಭವಿಸಲು ಸಾಧ್ಯವಿಲ್ಲ ಎಂದು ಶೇ.82ರಷ್ಟು ಮಂದಿ ಹೇಳಿದ್ದಾರೆ.
ಮತ್ತೊಂದು ಅಚ್ಚರಿಯ ಫಲಿತಾಂಶವನ್ನು ಹೊರಗೆಡವಿರುವ ಈ ಸಮೀಕ್ಷೆ, ಮಹಿಳೆಯೊಬ್ಬಳು ಸಾರ್ವಜನಿಕ ಸ್ಥಳದಲ್ಲಿ ಪುರುಷನಿಂದ ಅನ್ಯಾಯಕ್ಕೊಳಗಾಗುವ ಸಂದರ್ಭದಲ್ಲಿ ಆಕೆಗೆ ಹತ್ತಿರವಿದ್ದವರ ಸಹಾಯ ಸಿಗುವುದು ಕೂಡ ಅಪರೂಪವೆಂದು ಶೇ.88ರಷ್ಟು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆಂದು ತಿಳಿಸಿದೆ.
ಅಲ್ಲದೆ ಬಹುತೇಕ ಮಹಿಳೆಯರು ಪೊಲೀಸರನ್ನು ನಂಬೋದೇ ಇಲ್ಲ. ಶೇ.19ರಷ್ಟು ಮಂದಿ ಮಾತ್ರ ತಮಗಾಗಿರುವ ಅನ್ಯಾಯವನ್ನು ಪೊಲೀಸರಿಗೆ ತಿಳಿಸಬೇಕೆಂದು ಹೇಳಿಕೊಂಡಿದ್ದಾರೆ.