2008ರ ನವೆಂಬರ್ 26ರಂದು ಮುಂಬೈ ಮೇಲೆ ಉಗ್ರರ ದಾಳಿ ಸಂದರ್ಭ, ಬದ್ರುದ್ದೀನ್ ತ್ಯಾಬ್ಜೀ ಲೇನ್ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿದ ಸಂದರ್ಭ, ಮೃತ ಐಪಿಎಸ್ ಅಧಿಕಾರಿ ಅಶೋಕ್ ಕಾಮ್ಟೆ ಅವರ ತಂಡದಲ್ಲಿದ್ದ ಪೊಲೀಸರೇ ನೆರವಿಗೆ ಧಾವಿಸಿರಲಿಲ್ಲ ಎಂಬ ಅಂಶವು ಬೆಳಕಿಗೆ ಬರತೊಡಗಿದೆ. ಈ ಗುಂಡಿನ ಚಕಮಕಿಯಲ್ಲಿ ಕಾಮ್ಟೆ ಮತ್ತಿತರ ಮೂವರು ಪೊಲೀಸರು ಮೃತರಾಗಿದ್ದರು.
ಇಷ್ಟು ಮಾತ್ರವಲ್ಲದೆ, ತಾನು ಕರ್ತವ್ಯದಲ್ಲಿದ್ದೆ ಎಂಬುದನ್ನು ತೋರಿಸಲೋಸುಗ ತಂಡದ ಒಬ್ಬ ಪೊಲೀಸ್ ಕಾನ್‌ಸ್ಟೇಬಲ್, ಕಂಟ್ರೋಲ್ ರೂಮ್‌ಗೆ ತಪ್ಪು ಮಾಹಿತಿಯನ್ನೂ ನೀಡಿದ್ದ, ಇದು ಇಡೀ ಪೊಲೀಸ್ ಪಡೆಯ ಕಾರ್ಯಾಚರಣೆಯ ದಿಕ್ಕು ತಪ್ಪಿಸಿತ್ತು!
ರಾತ್ರಿ ಉಗ್ರರ ಅಟ್ಟಹಾಸ ನಡೆಯುತ್ತಿದ್ದಾಗ ವಿಶೇಷ ಘಟಕಗಳ ಪೊಲೀಸರೂ ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಪೊಲೀಸರು ಕಾಮಾ ಆಸ್ಪತ್ರೆ ಬಳಿ ನೆರೆದಿದ್ದರು ಎಂಬುದನ್ನು ಪೊಲೀಸರ ಲಾಗ್ ದಾಖಲೆಗಳು ತೋರಿಸುತ್ತವೆ. ಆದರೆ ಪಕ್ಕದ ಲೇನ್‌ನಲ್ಲಿ ಅಜ್ಮಲ್ ಕಸಬ್ ಮತ್ತು ಇಸ್ಮಾಯಿಲ್ ಖಾನ್ ಎಂಬಿಬ್ಬರು ಉಗ್ರರು ಐಪಿಎಸ್ ಅಧಿಕಾರಿಗಳಾದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಕಾಮ್ಟೆ, ಇನ್‌ಸ್ಪೆಕ್ಟರ್ ವಿಜಯ್ ಸಾಲಸ್ಕರ್ ಮತ್ತು ನಾಲ್ವರು ಕಾನ್‌ಸ್ಟೇಬಲ್‌ಗಳ ಮೇಲೆ ಗುಂಡು ಹಾರಿಸಿ ಕೊಂದಾಗ, ಯಾರೊಬ್ಬರೂ ನೆರವಿಗೆ ಧಾವಿಸಲಿಲ್ಲ.
ಆಸ್ಪತ್ರೆಯ ಹಿಂಭಾಗದಲ್ಲಿದ್ದ ಪೊಲೀಸರು ಕರ್ಕರೆ ತಂಡವು ಧಾವಿಸುತ್ತಿದ್ದ ವಾಹನವನ್ನು ಹಿಂಬಾಲಿಸುವುದರ ಬಗೆಗಾಗಲೀ ಅಥವಾ ಶೂಟಿಂಗ್ ಸದ್ದು ಕೇಳಿ ಬಂದ ಕಡೆ ತಪಾಸಣೆ ನಡೆಸುವ ಕಾರ್ಯವನ್ನಾಗಲೀ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬ ಅಂಶವು ಮಾಧ್ಯಮಗಳಲ್ಲಿ ವರದಿಯಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.