ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಬಾಬ್ರಿ ದ್ವಂಸಕ್ಕೆ ಕಾಂಗ್ರೆಸ್ ಸಹಕಾರ': ಬಿಜೆಪಿ ಪರ ಎಸ್‌ಪಿ ಆರೋಪ! (SP | BJP | Amar Singh | Liberhan Commission | Babri Masjid)
'ಬಾಬ್ರಿ ದ್ವಂಸಕ್ಕೆ ಕಾಂಗ್ರೆಸ್ ಸಹಕಾರ': ಬಿಜೆಪಿ ಪರ ಎಸ್‌ಪಿ ಆರೋಪ!
ನವದೆಹಲಿ, ಶುಕ್ರವಾರ, 4 ಡಿಸೆಂಬರ್ 2009( 13:14 IST )
PTI
ಕಳೆದ ಲೋಕಸಭಾ ಚುನಾವಣೆಯ ಸೋಲಿನ ಗಾಯದಿಂದ ಮೆಲ್ಲನೆ ಚೇತರಿಸಿಕೊಳ್ಳಲು ಯತ್ನಿಸುತ್ತಿರುವ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸ್ವಲ್ಪ ಸ್ವಲ್ಪವೇ ಬಿಜೆಪಿಯ ಜೊತೆಗೆ ಸಖ್ಯ ಬೆಳೆಸಿಕೊಳ್ಳುತ್ತಿದೆ. ಲಿಬರ್ಹಾನ್ ಆಯೋಗದ ವರದಿ ಪ್ರಕಟವಾದಂದಿನಿಂದ ಸಮಾಜವಾದಿ ಪಕ್ಷ ಅತ್ತ ಬಿಜೆಪಿಯನ್ನು ದೂರದೆ ಇತ್ತ ಕಾಂಗ್ರೆಸನ್ನೇ ತನ್ನ ಸಿಟ್ಟಿನ ಕಿಡಿಯಾಗಿಸುವತ್ತ ಗಮನ ಹರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅಷ್ಟೇ ಅಲ್ಲ, ಬಾಬ್ರಿ ಮಸೀದಿ ದ್ವಂಸವಾದ ಕರಾಳ ದಿನವಾದ ಬರುವ ಡಿಸೆಂಬರ್ 6ರಂದು ಸಮಾಜವಾದಿ ಪಕ್ಷ 'ಹೇ ಕಾಂಗ್ರೆಸ್' ಸ್ಲೋಗನ್ ಹಿಡಿದು ಬೀದಿಗಿಳಿಯಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್, ಬಾಬ್ರಿ ಮಸೀದಿ ದ್ವಂಸ ಕುರಿತಂತೆ ಬಿಜೆಪಿಯನ್ನು ಎಲ್ಲೂ ದೂರಲಿಲ್ಲ. ಜೊತೆಗೆ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ, ಒಂದು ವೇಳೆ ಬಿಜೆಪಿ ತನ್ನ ಧಾರ್ಮಿಕ ಮೂಲಭೂತವಾದ ಧೋರಣೆಯನ್ನು ಕೊಂಚ ಸಡಿಲಿಸಿದರೆ ಸಮಾಜವಾದಿ ಪಕ್ಷ ಬಿಜೆಪಿ ಜೊತೆಗೆ ಸಖ್ಯ ಬೆಳೆಸಲು ಸಿದ್ಧ ಎಂದು ನೇರವಾಗಿಯೇ ಹೇಳಿದ್ದಾರೆ. ಅಲ್ಲದೆ, ಇಂಥ ಪ್ರಕ್ರಿಯೆ ಸಾಧ್ಯವಾದರೆ ವಿರೋಧಪಕ್ಷಕ್ಕೆ ಬಲ ಬರುತ್ತದೆ ಎಂದೂ ಅಮರ್ ಸಿಂಗ್ ಪ್ರತಿಪಾದಿಸಿದ್ದಾರೆ.
ಪತ್ರಿಕಾಗೋಷ್ಠಿಯುದ್ಧಕ್ಕೂ ಮುಲಾಯಂ ಸಿಂಗ್ ಅವರ ಮಾತಿನಲ್ಲೂ ಇದೇ ಸೂಚನೆ ಮೇಳೈಸಿತ್ತು. ಮಸೀದಿಯ ಗೇಟನ್ನು ತೆಗೆದವರು ಯಾರು? ಯಾರು ಮೂರ್ತಿಯನ್ನು ಅಲ್ಲಿ ಪ್ರತಿಷ್ಠಾಪಿಸಿದರು? ಯಾವ ಮುಖಂಡ ಅಯೋಧ್ಯೆಯಿಂದ ಈ ಜಾಥಾ ಶುರು ಮಾಡಿದರು ಹಾಗೂ ರಾಮರಾಜ್ಯದ ಭರವಸೆ ನೀಡಿದರು? ಎಂದು ಪ್ರಶ್ನಿಸಿದ ಮುಲಾಯಂ, ಒಟ್ಟಾರೆ ಲಿಬರ್ಹಾನ್ ವರದಿಯೆಂದು ನಿಜಕ್ಕೂ ಆಧಾರವೇ ಇಲ್ಲದ್ದು. ಅದು ಯೂಸ್‌ಲೆಸ್ ಎಂದು ವ್ಯಂಗ್ಯವಾಡಿದರು.
ನಮ್ಮ ಜಾಥಾದ ಸ್ಲೋಗನ್ 'ಹೇ ರಾಮ್' ಎಂದಾಗಿತ್ತು. ಆದರೆ ಅದನ್ನು ನಾವು ಆಮೇಲೆ 'ಹೇ ರಾವ್' ಎಂದು ಬದಲಾಯಿಸಲು ಯೋಚಿಸಿದೆವು. ಆಮೇಲೆ ಮಾಜಿ ಪ್ರಧಾನಿ ರಾವ್ ಈಗ ಬದುಕಿಲ್ಲವೆಂಬ ಕಾರಣಕ್ಕೆ ಅದನ್ನು 'ಹೇ ಕಾಂಗ್ರೆಸ್' ಎಂದು ಬದಲಾಯಿಸಿದ್ದೇವೆ ಎಂದು ಮುಲಾಯಂ ವಿವರಿಸಿದರು.
ಬಾಬ್ರಿ ದ್ವಂಸಕ್ಕೆ ರಾವ್ ಕುಮ್ಮಕ್ಕು!: ಇದೇ ಸಂದರ್ಭ ಅಮರ್ ಸಿಂಗ್, ಶೀಲಾ ದೀಕ್ಷಿತ್ ಅವರು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಶಾಮೀಲಿನ ಕುರಿತು ನೇರವಾಗಿ ಆರೋಪಿಸಿದ ಪತ್ರದ ಪ್ರತಿ ತನಗೆ ಸಿಕ್ಕಿರುವುದಾಗಿ ಹೇಳಿದರು.
ಈ ಪತ್ರವನ್ನು ಮುಲಾಯಂ ಸಿಂಗ್ ಅವರು ಲೋಕಸಭೆಯಲ್ಲಿ ಓದಲಿದ್ದಾರೆ. ನಾನು ರಾಜ್ಯಸಭೆಯಲ್ಲಿ ಈ ಪತ್ರವನ್ನ ಓದಲಿದ್ದೇನೆ. ಆ ಪತ್ರದಲ್ಲಿ ಶೀಲಾ ದೀಕ್ಷಿತ್ ಅವರು ಮಾಜಿ ಪ್ರಧಾನಿ ನರಸಿಂಹರಾವ್ ಅವರು ಪರೋಕ್ಷವಾಗಿ ಬಾಬ್ರಿ ಮಸೀದಿ ದ್ವಂಸ ಮಾಡಲು ಸಂಘ ಪರಿವಾರದ ಜೊತೆಗೆ ಒಳಸಂಚು ನಡೆಸಿದ್ದಾರೆಂದು ನೇರವಾಗಿ ಆರೋಪಿಸಿದ್ದಾರೆ ಎಂದು ಅಮರ್‌ಸಿಂಗ್ ವಿವರಿಸಿದರು.
ಮುಂದಿನ ವಾರದಲ್ಲಿ ಲೋಕಸಭೆಯಲ್ಲಿ ಮತ್ತೆ ಲಿಬರ್ಹಾನ್ ವರದಿ ಚರ್ಚೆಗೆ ಬರಲಿದೆ. ಡಿ.18ರಂದು ಲೋಕಸಭೆಯಲ್ಲಿ ಸಮಾಜವಾದಿ ಪಕ್ಷ ಇತರ ಪ್ರಮುಖ ವಿರೋಧಪಕ್ಷಗಳ (ಐಎನ್ಎಲ್‌ಡಿ, ಟಿಡಿಪಿ, ಆರ್ಎಲ್‌ಡಿ, ಜೆಡಿಎಸ್ ಹಾಗೂ ಆರ್‌ಜೆಡಿ) ಮುಖಂಡರ ಜೊತೆಗೆ ಲಿಬರ್ಹಾನ್ ವರದಿ ಕುರಿತು ದ್ವನಿ ಎತ್ತಲಿದ್ದೇವೆ. ಜೊತೆಗೆ ಬೆಲೆ ಏರಿಕೆ, ಅಭಿವೃದ್ಧಿ ಕಾರ್ಯಗಳ ವಿಳಂಬ ಧೋರಣೆ, ಹಾಗೂ ಹಲವು ಆಯೋಗಗಳ ವರದಿಗಳನ್ನು ಜಾರಿಗೆ ತರುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರದ ವಿರುದ್ಧವೂ ತಿರುಗಿ ಬೀಳಲಿದ್ದೇವೆ ಎಂದು ಮುಲಾಯಂ ತಿಳಿಸಿದರು.