ಅಯೋಧ್ಯೆಯ ವಿವಾದದ ಸ್ಥಳವನ್ನು 'ಶ್ರೀ ರಾಮ ಜನ್ಮಭೂಮಿ' ಎಂದು ವರ್ಣಿಸುವ ಕರಪತ್ರಗಳನ್ನು ಹಿಂತೆಗೆದುಕೊಳ್ಳಲು ಉತ್ತರ ಪ್ರದೇಶದ ಮಾಯಾವತಿ ಸರಕಾರ ನಿರ್ಧರಿಸಿದೆ. ಅಯೋಧ್ಯೆಯನ್ನು ಶ್ರೀರಾಮ ಜನ್ಮಭೂಮಿ ಎಂದು ವಿವರಿಸಿರುವುದು ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಅಯೋಧ್ಯೆಯ ಕುರಿತಾದ ಪುಟ್ಟ ಕೈಪಿಡಿಯಲ್ಲಿದ್ದ ಈ ಅಲಕ್ಷ್ಯದ ತಪ್ಪಿನಿಂದಾಗಿ ಇರಿಸುಮುರಿಸಿನ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ನಾವು ಅದನ್ನು ಈಕ್ಷಣದಿಂದಲೇ ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಮಹಾ ನಿರ್ದೇಶಕ ಅವನೀಶ್ ಕುಮಾರ್ ಅವಸ್ಥಿ ಹೇಳಿದ್ದಾರೆ.
ಈ ರೀತಿಯ ಪ್ರಕಾಶನಕ್ಕೆ ಕಾರಣವಾದ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದವು ಇನ್ನೂ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಉಳಿದಿರುವಾಗ, ಈ ರೀತಿ (ರಾಮ ಜನ್ಮಭೂಮಿ) ಬರೆಯುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದರು.
ಈ ಕೈಪಿಡಿಯನ್ನು ಪ್ರವಾಸೋದ್ಯಮ ನಿರ್ದೇಶಾಲಯದ ಅನುಮತಿಯಿಲ್ಲದೆಯೇ ಫೈಜಾಬಾದ್‌ನಲ್ಲಿ ಮುದ್ರಿಸಲಾಗಿದೆ ಎಂದು ಅವರು ಹೇಳಿದರು. ಬಾಬರಿ ಮಸೀದಿ ಧ್ವಂಸ ಪ್ರಕರಣದ 17ನೇ ವಾರ್ಷಿಕ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಕೈಪಿಡಿ ತೀವ್ರ ಕೋಲಾಹಲ ಎಬ್ಬಿಸಿತ್ತು.
ಈ ಸ್ಥಳಕ್ಕಾಗಿ ನಡೆಯುತ್ತಿರುವ ಕಾನೂನು ಹೋರಾಟದ ಅರ್ಜಿದಾರರಲ್ಲೊಬ್ಬರಾಗಿರುವ ಹಾಜಿ ಮೆಹಬೂಬ್, ಅವರು ಈ ವಿಷಯವನ್ನೂ ನ್ಯಾಯಾಲಯಕ್ಕೆ ಎಳೆಯುವುದಾಗಿ ಬೆದರಿಕೆಯೊಡ್ಡಿದ್ದರು. 'ಆಡಳಿತವು ಈ ರೀತಿಯ ಪುಸ್ತಕ ಪ್ರಕಾಶಿಸುವುದಾದರೂ ಹೇಗೆ, ಇದು ನ್ಯಾಯಾಂಗ ನಿಂದನೆಯಾಗುವುದಿಲ್ಲವೇ?' ಎಂದವರು ಪ್ರಶ್ನಿಸಿದ್ದಾರೆ.
ಆದರೆ, ಇದರಲ್ಲೇನೂ ತಪ್ಪಿಲ್ಲ ಎಂಬುದು ವಿಶ್ವ ಹಿಂದೂ ಪರಿಷತ್ ಅಭಿಪ್ರಾಯ. 1935ರಿಂದಲೂ, ಈ ತಾಣವನ್ನು ರಾಮಜನ್ಮಭೂಮಿ ಎಂದೇ ಕರೆಯಲಾಗುತ್ತಿತ್ತು ಮತ್ತು ರಾಮ ಹುಟ್ಟಿದ್ದು ಇಲ್ಲೇ ಆಗಿರುವುದರಿಂದ ಇದು ಸತ್ಯವೂ ಹೌದು. ಅದನ್ನು ಅಧಿಕೃತ ಪ್ರಕಾಶನವೊಂದರಲ್ಲಿ ನೇರವಾಗಿಯೇ ಹೇಳಿದ್ದಾರೆ, ತಪ್ಪೇನಿಲ್ಲ ಎಂದು ವಿಹಿಂಪ ಪ್ರತಿನಿಧಿ ಶರದ್ ಸರ್ಮಾ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ತಣ್ಣಗಾಗಿ ಹೋಗಿದ್ದ ಅಯೋಧ್ಯೆ ವಿಷಯವು, ಇತ್ತೀಚೆಗೆ ಲೆಬರ್ಹಾನ್ ಆಯೋಗದ ವರದಿ ಬಹಿರಂಗವಾದ ಬಳಿಕ ಮತ್ತೊಮ್ಮೆ ಮೇಲೆದ್ದುನಿಂತಿದೆ. 16ನೇ ಶತಮಾನದ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಆಯೋಗದ ವರದಿಯಲ್ಲಿ ಸಂಘ ಪರಿವಾರದ ಸದಸ್ಯರ ಮೇಲೆ ಆರೋಪ ಹೊರಿಸಲಾಗಿತ್ತು. ವರದಿ ಬಹಿರಂಗವಾದ ಹಿನ್ನೆಸೆಯಲ್ಲಿ, ನವೆಂಬರ್ 24ರಂದು ಸಂಸತ್ತಿನಲ್ಲಿಯೂ ವರದಿ ಮಂಡಿಸಲಾಗಿತ್ತು.