ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅತ್ಯಾಚಾರ: ಅಪ್ರಾಪ್ತೆಗೆ ಬಲವಂತ ಹೆರಿಗೆ, ಮಗು ಕೊಂದ ವೈದ್ಯೆಯರು! (Women doctors Force Rape Victim to Deliver, Kill Infant)
Bookmark and Share Feedback Print
 
ಅತ್ಯಾಚಾರಕ್ಕೊಳಗಾಗಿ ಏಳು ತಿಂಗಳ ಗರ್ಭಿಣಿಯಾಗಿದ್ದ ಅಪ್ರಾಪ್ತ ಹುಡುಗಿಯೊಬ್ಬಾಕೆಗೆ ಬಲವಂತವಾಗಿ ಹೆರಿಗೆ ಮಾಡಿಸಿ ಹಸುಗೂಸನ್ನು ಕೊಂದ ಆರೋಪದಲ್ಲಿ ಮಹಾರಾಷ್ಟ್ರ ಪೊಲೀಸರು ಇಬ್ಬರು ಮಹಿಳಾ ವೈದ್ಯರನ್ನು ಬಂಧಿಸಿದ ಆಘಾತಕಾರಿ ಘಟನೆ ವರದಿಯಾಗಿದೆ.

ರಾಯಗಢ ಜಿಲ್ಲೆಯ ಪೇಣ್ ಎಂಬಲ್ಲಿನ ಸೀತಾಮಾಯಿ ಆಸ್ಪತ್ರೆಗೆ ಏಳೆಂಟು ತಿಂಗಳ ಗರ್ಭಿಣಿ, 15ರ ಹರೆಯದ ಹುಡುಗಿಯನ್ನು ನವೆಂಬರ್ 29ರಂದು ದಾಖಲಿಸಲಾಗಿತ್ತು. ಪ್ರಮೋದಿನಿ ಪರಾಂಜಪೆ ಎಂಬ ಹೆರಿಗೆ ತಜ್ಞರ ಈ ಆಸ್ಪತ್ರೆಯಲ್ಲಿ, ಆಕೆ ಮತ್ತು ಇನ್ನೊಬ್ಬ ಹೆರಿಗೆ ತಜ್ಞೆ ಡಾ.ಉಷಾ ಬರ್ಭಾವಕರ್ ಸೇರಿಕೊಂಡು, ಈ ಹುಡುಗಿಯು ಬಲವಂತವಾಗಿ ಮಗು ಹೆರುವಂತೆ ಮಾಡಿದ್ದರು ಎಂದು ತನಿಖಾಧಿಕಾರಿ ಐ.ಎಸ್.ಪಾಟೀಲ್ ತಿಳಿಸಿದ್ದಾರೆ.

ಹುಟ್ಟಿದ ಮಗುವನ್ನು ಸ್ನಾನ ಮಾಡಿಸದೆಯೇ ತಟ್ಟೆಯೊಂದರಲ್ಲಿ ಇರಿಸಲಾಗಿದ್ದು, ಮೂರು ದಿನಗಳ ಕಾಲ ಹಸುಗೂಸು ಅನ್ನಾಹಾರವಿಲ್ಲದೆ ಪ್ರಾಣ ತ್ಯಜಿಸಿತು. ಆ ಸಂದರ್ಭ ಮಗುವನ್ನು ಅದರ ತಾಯಿಗೂ ತೋರಿಸಲಾಗಿರಲಿಲ್ಲ ಎಂದು ಪಾಟೀಲ್ ವಿವರಿಸಿದ್ದಾರೆ.

ಬಳಿಕ ಮಗುವನ್ನು ಬೇರೊಂದು ಕ್ಲಿನಿಕ್‌ನ ಕಸದ ತೊಟ್ಟಿಯಲ್ಲಿ ಹಾಕುವಂತೆ ಡಾ.ಪರಾಂಜಪೆ ಅವರು ತಮ್ಮ ಚಾಲಕನಿಗೆ ಸೂಚಿಸಿದರು. ಬುಧವಾರ ಸಂಜೆ ದುರ್ದೈವಿ ಮಗುವನ್ನು ತೊಟ್ಟಿಯಲ್ಲಿ ಹಾಕುತ್ತಿದ್ದಾಗ ನೋಡಿದ ಸ್ಥಳೀಯರು ಕೂಗೆಬ್ಬಿಸಿದಾಗ ಪ್ರಕರಣ ಬಯಲಾಗಿತ್ತು. ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಬಳಿಕ, ಬುಧವಾರ ರಾತ್ರಿಯೇ ಇಬ್ಬರು ವೈದ್ಯರನ್ನು ಬಂಧಿಸಲಾಯಿತು ಎಂದು ಪಾಟೀಲ್ ಹೇಳಿದರು.

ಈ ಮಧ್ಯೆ, ಈ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ೆಸಗಿದ್ದ ರಾಜು ಎಂಬ ಯುವಕನೊಬ್ಬನನ್ನೂ ಗುರುವಾರ ರಾತ್ರಿ ಬಂಧಿಸಲಾಗಿದೆ. ಮಗುವನ್ನು ಕೊಲ್ಲಿಸುವಲ್ಲಿ ಹುಡುಗಿಯ ಹೆತ್ತವರ ಕೈವಾಡವಿದೆಯೇ ಎಂಬ ಕುರಿತಾಗಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಚಾಲಕನ ಪತ್ತೆಗೆ ಶೋಧ ಆರಂಭಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ