ಪೊಲೀಸರ ವರ್ತನೆ ಖಂಡಿಸಿ ಕೈಗಾರಿಕಾ ನಗರ ಲೂಧಿಯಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಸೆ ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದ ಪರಿಣಾಮ ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಒಬ್ಬ ಕಾರ್ಮಿಕ ಲೂಟಿಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿದರೂ ಪ್ರಥಮ ಮಾಹಿತಿ ವರದಿಯನ್ನು ದಾಖಲು ಮಾಡಲು ಪೊಲೀಸರು ನಿರಾಕರಿಸಿದ ಕಾರಣವೇ ಘಟನೆಗೆ ಮೂಲವಾಗಿದೆ.
ಶುಕ್ರವಾರ ಬೆಳಿಗ್ಗೆ ಸಾವಿರಾರು ವಲಸೆ ಕಾರ್ಮಿಕರು ದಾಂದಾರಿ ಪ್ರದೇಶದ ಹೊರವಲಯದಲ್ಲಿ ಸಭೆ ಸೇರಿ, ಪೊಲೀಸರು ದಾಖಲಿಸಿದ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳದ ಬಗ್ಗೆ ಘೋಷಣೆ ಕೂಗಲು ಆರಂಭಿಸಿದರು. ತದನಂತರ ಪ್ರತಿಭಟನೆಗೆ ತಿರುಗಿ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 1ರಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಕಲ್ಲು ಎಸೆಯಲು ಆರಂಭಿಸಿದರು. ಅಲ್ಲದೆ, ಅನೇಕ ಲಾರಿ ಮತ್ತು ಬಸ್‌ಗಳಿಗೆ ಬೆಂಕಿ ಹಚ್ಚಿದರು.
ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ಗಾಳಿಯಲ್ಲಿ ಗುಂಡು ಹಾರಿಸಿದರೂ ಕೂಡ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.