ಭಾರತದಲ್ಲಿ ಅಲ್ಪಸಂಖ್ಯಾತರೇ ಇಲ್ಲ; ಈಗ ನಾವು ಕರೆಯುತ್ತಿರುವ ಅಲ್ಪಸಂಖ್ಯಾತರೆಲ್ಲರ ಪೂರ್ವಜರು ಹಿಂದೂಗಳಾಗಿದ್ದರು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
ರಾಷ್ಟ್ರೀಯ ರಾಜಧಾನಿಯಲ್ಲಿನ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಭಾಗ್ವತ್, 'ಇಲ್ಲಿ ಅಲ್ಪಸಂಖ್ಯಾತರಿಲ್ಲ. ಅಂತಹ ಪದ ಬಳಕೆ ಮಾಡುತ್ತಿದ್ದರೆ ಅದು ಕೇವಲ ವ್ಯಾಖ್ಯಾನ ಮಾತ್ರ' ಎಂದರು.
ಇಲ್ಲಿ ಯಾರೆಲ್ಲಾ ವಾಸಿಸುತ್ತಿದ್ದಾರೋ, ಅವರೆಲ್ಲಾ ಭಾರತ ಪುತ್ರರು. 40,000 ವರ್ಷಗಳ ಹಿಂದೆ ಬೇರೆಡೆಯಿಂದ ಭಾರತಕ್ಕೆ ಬಂದವರನ್ನು ಗುರುತಿಸಲು ಜನಾಂಗೀಯತೆಯನ್ನು ಬಳಸಲಾಗುತ್ತಿದ್ದರೂ, ಈ ಉಪಖಂಡದಲ್ಲಿನ ಜನರ ಡಿಎನ್ಎ (ವಂಶವಾಹಿ) ಒಂದೇ ರೀತಿಯಾಗಿದೆ. ಭಾರತದಲ್ಲಿನ ಎಲ್ಲಾ ಅಲ್ಪಸಂಖ್ಯಾತರೂ ಹಿಂದೂಗಳ ಮುಂದುವರಿದ ಪೀಳಿಗೆಯವರಾಗಿದ್ದು, ಒಂದೇ ಪೂರ್ವಜರನ್ನು ಹೊಂದಿದ್ದಾರೆ ಎಂದು ಅವರು ವಿವರಣೆ ನೀಡಿದರು.
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾತನಾಡುತ್ತಾ ಭಾಗ್ವತ್ ಇದೇ ಹೇಳಿಕೆಯನ್ನು ನೀಡಿದ್ದನ್ನು ಈಗ ಸ್ಮರಿಸಬಹುದಾಗಿದೆ.
ಭಾವನಾತ್ಮಕ ಸಮನ್ವಯತೆಯ ಅಗತ್ಯತೆಯ ಮಹತ್ವದ ಕುರಿತು ಮಾತಿಗಿಳಿದಿರುವ ಆರೆಸ್ಸೆಸ್ ಮುಖಂಡ, 'ಅಲ್ಪಸಂಖ್ಯಾತರನ್ನು ಓಲೈಸಲು ಸರಕಾರಗಳು ಸಾಕಷ್ಟು ಸವಲತ್ತುಗಳು ಮತ್ತು ಅವರ ಪರವಾಗಿ ಕೆಲಸ ಮಾಡುತ್ತವೆ. ಇದರಿಂದ ಸಮುದಾಯಗಳ ನಡುವಿನ ಅಂತರವಷ್ಟೇ ಹೆಚ್ಚಾಗುತ್ತಿದೆ' ಎಂದರು.
ನಮ್ಮ ರಾಜಕಾರಣಿಗಳು ಇಂತಹ ಸವಲತ್ತುಗಳ ಕುರಿತು ರಾಜಕೀಯ ಮೈಲೇಜುಗಳಿಗಾಗಿ ಚುನಾವಣೆ ಸಂದರ್ಭದಲ್ಲಿ ಹುಟ್ಟಿ ಹಾಕುತ್ತಾರೆ ಎಂದೂ ಅವರು ಇದೇ ಸಂದರ್ಭದಲ್ಲಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಸಾವಿರಾರು ವರ್ಷಗಳ ಕಾಲ ದಿಟ್ಟತನದಿಂದ ಹೋರಾಡಿದ ಹಿಂದೂಗಳು ಬಾಯ್ಮುಚ್ಚಿಕೊಂಡು ಸುಮ್ಮನಿದ್ದ ಕಾರಣ ಭಾರತದ ವಿಭಜನೆಯಾಯಿತು ಎಂದ ಅವರು, ಕಳೆದ 1,500ರಿಂದ 2,000 ವರ್ಷಗಳಲ್ಲಿ ಹೊಡೆದು, ಬಡಿದು, ದರೋಡೆ ಮಾಡಿದ್ದನ್ನು ಹಿಂದೂಗಳು ಮರೆತಿದ್ದಾರೆ ಎಂದು ಅಭಿಪ್ರಾಯಪಟ್ಟರು.