ವಿಚ್ಚೇದಿತ ಮುಸ್ಲಿಂ ಮಹಿಳೆಯೊಬ್ಬಾಕೆ ತಾನು ಮರುಮದುವೆ ಆಗದೇ ಇದ್ದರೆ ತನ್ನ ಇದ್ದತ್(ಮೂರು ತಿಂಗಳು) ಅವಧಿಯ ಬಳಿಕವೂ ತನ್ನ ಮಾಜಿ ಪತಿಯಿಂದ ಜೀವನಾಂಶ ಪಡೆಯಲು ಹಕ್ಕುದಾರಳು ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ.
ನ್ಯಾಯಮೂರ್ತಿಗಳಾದ ಬಿ. ಸುದರ್ಶನ್ ರೆಡ್ಡಿ ಹಾಗೂ ದೀಪಕ್ ವರ್ಮಾ ಅವರನ್ನೊಳಗೊಂಡ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. ಇಮ್ರಾನ್ ಖಾನ್ ಎಂಬಾತ ತನ್ನ ವಿಚ್ಚೇದಿತ ಪತ್ನಿ ಶಬನಾ ಬಾನು ಜೀವನಾಂಶಕ್ಕೆ ಹಕ್ಕುದಾರಳಲ್ಲ ಎಂಬುದಾಗಿ ಮುಸ್ಲಿಂ ಮಹಿಳಾ ಹಕ್ಕು ಕಾಯ್ದೆ, 1986 (ವಿಚ್ಚೇದನದ ವೇಳೆ ಹಕ್ಕುಗಳ ರಕ್ಷಣೆ) ಉಲ್ಲೇಖಿಸಿ ವಾದಿಸಿದ್ದ. ಶಬನಾ ಬಾನು ಇದ್ದತ್ ಅವಧಿ ಬಳಿಕ ಯಾವುದೇ ಜೀವನಾಂಶಕ್ಕೆ ಬಾಧ್ಯಳಲ್ಲ ಎಂಬುದಾಗಿ ಆತ ವಾದಿಸಿದ್ದ. ಅಲ್ಲದೆ ಸುಪ್ರಸಿದ್ಧ ಶಾಬಾನು ಪ್ರಕರಣವನ್ನು ಉಲ್ಲೇಖಿಸಿದ್ದ.
ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125 ಹಾಗೂ ಕುಟುಂಬ ನ್ಯಾಯಾಲಯಗಳ ಕಾಯ್ದೆ 1984ರ ಸೆಕ್ಷನ್ 7ರ ಪ್ರಕಾರ, ಮುಸ್ಲಿಂ ಮಹಿಳೆಯೂ ಸಹ ತಾನು ಮರುಮದುವೆಯಾಗದೇ ಇದ್ದರೆ ಜೀವನಾಂಶ ಪಡೆಯಲು ಹಕ್ಕುದಾರಳು ಎಂದು ಹೇಳಿದೆ.
ಈ ತೀರ್ಪು ಮಧ್ಯಪ್ರದೇಶದ ಒಂದು ವಿಚಾರಣಾ ನ್ಯಾಯಾಲಯ ಹಾಗೂ ಮಧ್ಯಪ್ರದೇಶ ಹೈಕೋರ್ಟ್ ನೀಡಿರುವ, ಮುಸ್ಲಿಂ ಮಹಿಳೆಯು ಇದ್ದತ್ ಅವಧಿಯ ಬಳಿಕ ಜೀವನಾಂಶಕ್ಕೆ ಅರ್ಹಳಲ್ಲ ಎಂಬುದಾಗಿ ನೀಡಿರುವ ತೀರ್ಪಿಗೆ ವ್ಯತಿರಿಕ್ತವಾಗಿರುವ ಕಾರಣ ಪ್ರಸಕ್ತ ತೀರ್ಪು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.
ಸಿಆರ್‌ಪಿಸಿಯ ಸೆಕ್ಷನ್ 125ರ ಪ್ರಕಾರ ಜೀವನಾಂಶವು ಇದ್ದತ್ ಅವಧಿಗೆ ಮಾತ್ರ ನಿಯಂತ್ರಿತವಲ್ಲ ಎಂಬುದಾಗಿ ನ್ಯಾಯಪೀಠ ಹೇಳಿದೆ. ಅರ್ಜಿದಾರರು ಎಲ್ಲಿಯ ತನಕ ಮರುವಿವಾಹವಾಗುವುದಿಲ್ಲವೋ ಅಲ್ಲಿಯ ತನಕ ತನ್ನ ಮಾಜಿ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂಬುದಾಗಿ ಕೋರ್ಟ್ ತೀರ್ಮಾನಿಸಿದೆ.