"ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡಿರುವುದಕ್ಕೆ ಹಿಂದೂ ಸಮೂಹಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ" ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗ್ವತ್ ಶನಿವಾರ ಹೇಳಿದ್ದಾರೆ. ಬಾಬ್ರಿ ಮಸೀದಿ ಧ್ವಂಸಗೊಂಡು 17 ವರ್ಷ ಸಲ್ಲುತ್ತಿರುವ ಸಂದರ್ಭದಲ್ಲಿ ಅವರ ಈ ಹೇಳಿಕೆ ಹೊರಬಿದ್ದಿದೆ.
ಚಂಡೀಘಢ ಪ್ರೆಸ್ ಕ್ಲಬ್‌ನಲ್ಲಿ ಮಾತನಾಡುತ್ತಿದ್ದ ಅವರು, "ಬಾಬ್ರಿ ಮಸೀದಿ ಧ್ವಂಸಕ್ಕೆ ಬಲಪಂಥೀಯ ಹಿಂದೂ ಸಮೂಹಕ್ಕೆ ಪಶ್ಚಾತ್ತಾಪವಿದೆಯೇ" ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಯಾವುದೇ ಪಶ್ಚಾತ್ತಾಪದ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
"ಅಲ್ಲಿ(ಅಯೋಧ್ಯೆಯಲ್ಲಿ) ರಾಮ ಮಂದಿರ ನಿರ್ಮಿಸಬೇಕೆಂದು ನಾವೆಲ್ಲ ಇಚ್ಚಿಸುತ್ತೇವೆ. ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಆರ್ಎಸ್ಎಸ್ ಯಾವಾಗಲೂ ಇರುತ್ತದೆ" ಎಂಬುದಾಗಿ ಭಾಗ್ವತ್ ನುಡಿದರು.
1992ರ ಡಿಸೆಂಬರ್ 6ರಂದು 16ನೆ ಶತಮಾನದ ಬಾಬ್ರಿ ಮಸೀದಿಯನ್ನು ಕರಸೇವಕರು ವಿಧ್ವಂಸಗೊಳಿಸಿದ್ದರು. ಭಗವಾನ್ ರಾಮನ ಜನ್ಮಸ್ಥಳವಾಗಿರುವ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಲಾಗಿದೆ ಎಂಬ ಹಿನ್ನೆಲೆಯಲ್ಲಿ ಮಸೀದಿಯನ್ನು ಧ್ವಂಸಮಾಡಲಾಗಿದ್ದು, ರಾಷ್ಟ್ರವ್ಯಾಪಿ ಕೋಮು ಹಿಂಸಾಚಾರಕ್ಕೆ ಕಾರಣವಾಗಿತ್ತು.
ಬಾಬ್ರಿ ಮಸೀದಿ ಧ್ವಂಸ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಲಿಬರ್ಹಾನ್ ಆಯೋಗದ ವರದಿಯ ವಿಶ್ವಾಸಾರ್ಹತೆಯನ್ನು ಭಾಗ್ವತ್ ಈ ಸಂದರ್ಭದಲ್ಲಿ ಪ್ರಶ್ನಿಸಿದರು. ಆ ವರದಿಯಲ್ಲಿ ಹೇಳಲಾಗಿರುವುದನ್ನು 1993ರಲ್ಲೂ ಹೇಳಬಹುದಿತ್ತು. ಆಯೋಗದ ವರದಿಯ ಕುರಿತು ಪ್ರಶ್ನಾರ್ಥಕ ಚಿಹ್ನೆಯಿದೆ. ಇದರಲ್ಲಿ ವಾಸ್ತವಕ್ಕೆ ಸಂಬಂಧಿಸಿದಂತೆ ಇದರಲ್ಲಿ ಸಾಕಷ್ಟು ದೋಷಗಳಿವೆ" ಎಂದು ಅವರು ನುಡಿದರು.
ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಆಯೋಗವು ಬೆಟ್ಟು ಮಾಡಿರುವಂತೆ ಯಾವುದೇ ಸಂಚು ಇಲ್ಲ ಮತ್ತು ಇದು ಸತ್ಯ ಎಂದು ಭಾಗ್ವತ್ ನುಡಿದರು.
ವರದಿಯಿಂದಾಗಿ ಬಿಜೆಪಿಯ ಉನ್ನತ ನಾಯಕರ ಘನತೆಗೆ ಧಕ್ಕೆಯುಂಟಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿಯು ತನ್ನ ಘನತೆಯ ವಿಚಾರವನ್ನು ತಾನೇ ಸರಿಪಡಿಸಿಕೊಳ್ಳಲಿದೆ ಎಂದು ನುಡಿದರು.