ಹೆಚ್ಚುತ್ತಿರುವ ಹಣದುಬ್ಬರಕ್ಕೆ ತಡೆ ಹೇರುವ ಮೂಲಕ, ಕೇಂದ್ರವು 'ಬಡವರ ವಿರುದ್ಧ ಸಾರಿರುವ ಯುದ್ಧ'ವನ್ನು ನಿಲ್ಲಿಸಬೇಕು ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಸರ್ಕಾರವನ್ನು ವಿನಂತಿಸಿದ್ದಾರೆ.
"ನಾವು ಸರ್ಕಾರದಲ್ಲಿ ಇಲ್ಲ. ಆಹಾರ ವಸ್ತುಗಳ ಮೇಲೆ ಶೇ.18ರಷ್ಟು ಬೆಲೆ ಏರಿಸಿರುವ ಕಾಂಗ್ರೆಸ್ ಬಡವರ ವಿರುದ್ಧ ಯುದ್ಧ ಸಾರಿದೆ" ಎಂಬುದಾಗಿ ಹೇಳಿದ್ದಾರೆ. ಭಾರತ ಪ್ರಕಾಶಿಸುತ್ತಿದೆ ಎಂದಿದ್ದ ವಿರೋಧ ಪಕ್ಷ ಬಡವರನ್ನು ನಿರ್ಲಕ್ಷಿಸಿತ್ತು ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಜೇಟ್ಲಿ ಈ ಪ್ರತಿಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಭಾನುವಾರ ಜಾರ್ಖಂಡ್‌ನಲ್ಲಿ ಭಾಗವಹಿಸಿದ್ದ ಚುನಾವಣಾ ಪ್ರಚಾರ ಸಭೆಗಳ ಉದ್ದಕ್ಕೂ, ಬಿಜೆಪಿಯ ಭಾರತ ಪ್ರಕಾಶಿಸುತ್ತಿದೆ ಘೋಷಣೆಯನ್ನು ಟೀಕಿಸುತ್ತಾ, ಅದು ಬಡತನವನ್ನು ನಿರ್ಲಕ್ಷಿಸಿತ್ತು ಎಂದು ಚೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜೇಟ್ಲಿ, ಬೆಲೆಏರಿಕೆಯ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಬಡವರ ವಿರುದ್ಧ ಯುದ್ಧ ಸಾರಿದೆ ಎಂಬುದಾಗಿ ಕಟಕಿಯಾಡಿದೆ.
ಅಗತ್ಯವಸ್ತುಗಳ ಬೆಲೆಏರುತ್ತಲೇ ಹೋಗುತ್ತಿರುವ ಏಕೈಕ ರಾಷ್ಟ್ರ ಭಾರತ ಎಂದು ಹೇಳಿದ ಜೇಟ್ಲಿ ಕೇಂದ್ರದಲ್ಲಿನ ತಪ್ಪು ರಾಜಕೀಯದಿಂದಾಗಿ ಇದು ನಡೆಯುತ್ತಿದೆ ಎಂದು ಹೇಳಿದರು. ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.