ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸಗೊಂಡು ಇಂದಿಗೆ (ಡಿ.6)17ವರ್ಷಗಳು ಸಂದಿದ್ದು, ಈ ಹಿನ್ನೆಲೆಯಲ್ಲಿ ಅಯೋಧ್ಯೆ ಸೇರಿದಂತೆ ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಅಂಗವಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ದೇಶಾದ್ಯಂತ ಬಾಬರಿ ಮಸೀದಿ ಧ್ವಂಸದ 17ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೇಶದ ಜನರು ಕೋಮುಸೌಹಾರ್ದತೆಯನ್ನು ಕಾಪಾಡಬೇಕು ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಮನವಿ ಮಾಡಿಕೊಂಡಿದ್ದಾರೆ.
ಬಾಬರಿ ಮಸೀದಿ ಧ್ವಂಸ ದಿನವನ್ನು ವಿಶ್ವ ಹಿಂದೂ ಪರಿಷತ್ ಶೌರ್ಯ ದಿನವನ್ನಾಗಿ ಆಚರಿಸುತ್ತಿದ್ದರೆ, ಸಮಾಜವಾದಿ ಪಕ್ಷ ಬ್ಲ್ಯಾಕ್ ಡೇಯನ್ನಾಗಿ ಆಚರಿಸುತ್ತಿದೆ. ಭಾನುವಾರ 17ನೇ ವರ್ಷಾಚರಣೆಯನ್ನು ಆಲ್ ಇಂಡಿಯಾ ಬಾಬರಿ ಮಸೀದಿ ಆಕ್ಷನ್ ಕಮಿಟಿ ಶಾಂತಿ ಮತ್ತು ಸೌಹಾರ್ದತೆಗಾಗಿ ವಿಶೇಷ ಪ್ರಾರ್ಥನೆ ನಡೆಸಲು ನಿರ್ಧರಿಸಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ಮಾರ್ಕೆಟ್ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಮತ್ತು ಬಿಎಸ್ಪಿ ಆಡಳಿತವಿರುವ ರಾಜ್ಯಗಳಲ್ಲಿ ಮತ್ತೆ ಕೋಮು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಹಿಂಸೆ ಭುಗಿಲೇಳುವ ಸಾಧ್ಯತೆ ಇದೆ ಎಂಬ ಗುಪ್ತಚರ ಇಲಾಖೆಯ ಮುನ್ಸೂಚನೆ ಮೇರೆಗೆ ಪ್ರಮುಖ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.