ಡಿಸೆಂಬರ್ 8ಮತ್ತು 12ರಂದು ನಡೆಯಲಿರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸುಮಾರು 70ಅಭ್ಯರ್ಥಿಗಳು ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಂದು ವರದಿಯೊಂದು ತಿಳಿಸಿದೆ.
ಜಾರ್ಖಂಡ್ ಅಸೆಂಬ್ಲಿ ಹಣಾಹಣಿಯ ಸ್ಪರ್ಧಾಕಣದಲ್ಲಿರುವ ಒಟ್ಟು 288 ಅಭ್ಯರ್ಥಿಗಳಲ್ಲಿ 69ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಎನ್‌ಜಿಓ ವರದಿಯೊಂದು ಬಹಿರಂಗಪಡಿಸಿದೆ.
ಇದರಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಸುಮಾರು 21ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡಿದೆ.! ಅದೇ ರೀತಿ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಹತ್ತು ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ.
ಜಾರ್ಖಂಡ್ ಚುನಾವಣಾ ಕಾವಲು ಸಮಿತಿಯ ಮಾಹಿತಿಯನ್ವಯ ಈ ವರದಿಯನ್ನು ಸಿದ್ದಪಡಿಸಿರುವುದಾಗಿ ಹೇಳಿದೆ. ಅಲ್ಲದೆ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್(ಎಜೆಎಸ್‌ಯು) 11ಕ್ರಿಮಿನಲ್ ಹಿನ್ನೆಲೆಯುಳ್ಳ ನಾಮಿನಿ ಅಭ್ಯರ್ಥಿಗಳಿಗೆ, ಸಿಪಿಐ(ಎಂ)ಎಲ್ ಏಳು, ಜಾರ್ಖಂಡ್ ವಿಕಾಸ್ ಮೋರ್ಚಾ 6 ಹಾಗೂ ರಾಷ್ಟ್ರೀಯ ಜನತಾದಳ(ಆರ್‌ಜೆಡಿ) 4ಮಂದಿಗೆ ಟಿಕೆಟ್ ನೀಡಿರುವುದಾಗಿ ವಿವರಿಸಿದೆ.
ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವವರಲ್ಲಿ 266 ಅಭ್ಯರ್ಥಿಗಳು ತಮ್ಮ ಆಸ್ತಿ ವಿವರನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, 20ಮಂದಿ ಒಂದು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸುರಾಭ್ ನರೈನ್ ಅವರ ಆಸ್ತಿ ಮೊತ್ತ 9ಕೋಟಿ ರೂಪಾಯಿ. ಸುಮಾರು 158ಅಭ್ಯರ್ಥಿಗಳು ಆಸ್ತಿ ಮೊತ್ತ ಲಕ್ಷಾಂತರ ರೂಪಾಯಿಗಳಲ್ಲಿ ಇದೆ. ಆದರೆ ಅವರು ತಮ್ಮ ಪಾನ್ ಕಾರ್ಡ್ ವಿವರಗಳನ್ನು ನೀಡಿಲ್ಲ ಎಂದು ವರದಿ ಹೇಳಿದೆ.