ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಆಗ್ರಹಿಸಿ ಕೆಲವು ದಿನಗಳಿಂದ ಹೋರಾಟ ನಡೆಸುತ್ತಿರುವ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್) 48ಗಂಟೆಗಳ ಕಾಲ ಬಂದ್‌ಗೆ ಕರೆ ನೀಡಿದ್ದು, ಆಂಧ್ರಪ್ರದೇಶದ ಹೈದರಾಬಾದ್ ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರತ್ಯೇಕ ರಾಜ್ಯ ಬೇಡಿಕೆ ಈಡೇರಿಸುವಂತೆ ಟಿಆರ್‌ಎಸ್ ವರಿಷ್ಠ ಕೆ.ಚಂದ್ರಶೇಖರ್ ಅವರು ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಭಾನುವಾರವೂ ಮುಂದುವರಿದಿದ್ದು, 8ನೇ ದಿನಕ್ಕೆ ಕಾಲಿಟ್ಟಿದೆ.
ಶನಿವಾರ ಮಧ್ಯರಾತ್ರಿಯಿಂದ ಆರಂಭಗೊಂಡಿರುವ ಬಂದ್ ಹಿನ್ನೆಲೆಯಲ್ಲಿ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿರುವ ಪರಿಣಾಮ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮತ್ತೊಂದೆಡೆ ಉದ್ರಿಕ್ತ ಪ್ರತಿಭಟನಾಕಾರರಿಂದ ಶಾಸಕರೊಬ್ಬರ ಕಾರಿಗೆ ಬೆಂಕಿ ಹಚ್ಚಿದ ಘಟನೆಯೂ ನಡೆದಿದೆ. ಕೆಲವೆಡೆ ಹಿಂಸಾಚಾರ ನಡೆದಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಹೈದರಾಬಾಗದ್ ಮತ್ತು ತೆಲಂಗಾಣದ ಕೆಲವು ಜಿಲ್ಲೆಗಳಲ್ಲಿ ಅಂಗಡಿ-ಮುಂಗಟ್ಟು, ವಾಣಿಜ್ಯ ಮಳಿಗೆ, ಸಿನಿಮಾ ಮಂದಿರ, ಪೆಟ್ರೋಲ್ ಬಂಕ್‌ಗಳು ಕೂಡ ಬಂದ್ ಆಗಿದ್ದು, ಬಸ್ ಸಂಚಾರವೂ ಸ್ಥಗಿತಗೊಂಡ ಕಾರಣ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು. ಬಂದ್‌ನಿಂದಾಗಿ ತೊಂದರೆ ಅನುಭವಿಸಬಾರದು ಎಂಬ ಮುನ್ನೆಚ್ಚರಿಕೆ ಅಂಗವಾಗಿ ಶನಿವಾರ ಪೆಟ್ರೋಲ್ ಬಂಕ್‌ಗಳಲ್ಲಿ ಸಾವಿರಾರು ವಾಹನಗಳು ಪೆಟ್ರೋಲ್ ತುಂಬಿಸಿಕೊಳ್ಳಲು ನಿಂತ ಪರಿಣಾಮ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.
ಉಪವಾಸ ಅಂತ್ಯಕ್ಕೆ ರೋಸಯ್ಯ ಮನವಿ: ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಚಂದ್ರಶೇಖರ್ ಅವರು ಸತ್ಯಾಗ್ರಹವನ್ನು ಕೈಬಿಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ.ರೋಸಯ್ಯ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಚಂದ್ರಶೇಖರ್ ಅವರು ಕೇಳಲಿ, ಬಿಡಲಿ ಪ್ರತಿಭಟನಾಕಾರರ ಮೇಲೆ ಹೂಡಿರುವ ಎಲ್ಲಾ ಮೊಕದ್ದಮೆಗಳನ್ನು ವಾಪಸ್ ಪಡೆಯುವುದಾಗಿಯೂ ಈ ಸಂದರ್ಭದಲ್ಲಿ ಭರವಸೆ ನೀಡಿದರು.