ಕ್ರಿಶ್ನಗರ್(ಪಶ್ಚಿಮ ಬಂಗಾಳ), ಸೋಮವಾರ, 7 ಡಿಸೆಂಬರ್ 2009( 11:31 IST )
ತನ್ನ ಮಿತ್ರಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್(ಟಿಸಿ) ಅತಿಯಾಡುತ್ತಿದೆ ಎಂಬುದಾಗಿ ಕೆಲವು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರೂ, ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಪ್ರಣಬ್ ಮುಖರ್ಜಿ ಮಾತ್ರ, 2011ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್-ಟಿಸಿ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದರೆ, ಮಮತಾ ಬ್ಯಾನರ್ಜಿ ಅವರೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ.
ಅವರು 2011ರ ಚುನಾವಣೆಗಳಿಗಾಗಿ ರಾಜಕೀಯ ವ್ಯೂಹವನ್ನು ಹಮ್ಮಿಕೊಳ್ಳಲು ನಾದಿಯ ಜಿಲ್ಲೆಯಲ್ಲಿ ಸಂಘಟಿಸಲಾಗಿದ್ದ ಚಿಂತನ ಶಿಬಿರದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಎಡರಂಗವನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಲ ಪಕ್ವವಾಗಿದೆ ಎಂದು ಅವರುಈ ಸಂದರ್ಭದಲ್ಲಿ ನುಡಿದರು.
ಕಾಂಗ್ರೆಸ್ ಈ ಹಿಂದೆ 2001ರಲ್ಲಿಯೂ ತೃಣಮೂಲ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಮಮತಾ ಬ್ಯಾನರ್ಜಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಬಿಂಬಿಸಿತ್ತು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಅತಿದೊಡ್ಡ ಮಿತ್ರ ಪಕ್ಷದ ಅಭ್ಯರ್ಥಿ ಮುಖ್ಯಮಂತ್ರಿಯಾಗುತ್ತಾರೆ. ಇದರಲ್ಲಿ ಹೊಸತೇನಿಲ್ಲ ಎಂಬುದಾಗಿ ಅವರು ನುಡಿದರು.