ಉತ್ತರ ಪ್ರದೇಶದ ಮುಸ್ಲಿಂ ತಜ್ಞರೊಬ್ಬರು ಭಗವದ್ಗೀತೆಯನ್ನು ಉರ್ದುವಿಗೆ ತರ್ಜಮೆಗೊಳಿಸಲು ಮುಂದಾಗಿದ್ದು, ಅವರು ಇದೀಗಾಗಲೇ 40 ಶ್ಲೋಕಗಳನ್ನು ಭಾಷಾಂತರಗೊಳಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿರುವ ಅವರು ಭಗವದ್ಗೀತೆಯನ್ನು ರಾಗವಾಗಿ ಹಾಡಲು ಅನುಕೂಲವಾಗುವಂತೆ ಅವರು ಅದನ್ನು ಉರ್ದುವಿಗೆ ರೂಪಾಂತರಿಸಿದ್ದಾರೆ.
ಲಕ್ನೋದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಅಂಬೇಡ್ಕರ್ ನಗರದ ನಿವಾಸಿಯಾಗಿರುವ ಜಲಾಲ್ಪುರಿ ಎಂಬವರು ಈ ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ. "ಗೀತೆಯನ್ನು ಉರ್ದುವಿಗೆ ಭಾಷಾಂತರಿಸುವುದು ಕಷ್ಟದ ವಿಚಾರವಲ್ಲವಾದರೂ, ಈ ಪವಿತ್ರ ಗ್ರಂಥವನ್ನು ಹಾಡಲು ಅನುಕೂಲವಾಗುವಂತೆ ರೂಪಾಂತರಿಸುವುದು ಕಷ್ಟಕರ ವಿಚಾರ" ಎಂದು ಜಬಲ್ಪುರಿ ಹೇಳುತ್ತಾರೆ.
"ಇದು ನನಗೆ ಸವಾಲಿನ ಕೆಲಸ. ಆದರೆ, ನನ್ನ ಯೋಜನೆಯಲ್ಲಿ ನಾನು ಯಶಸ್ವಿಯಾಗುತ್ತೇನೆ ಎಂಬ ನಂಬುಗೆ ಇದೆ. ಸಂಪೂರ್ಣ ಭಗವದ್ಗೀತೆಯನ್ನು ನಾನು ಉರ್ದುವಿಗೆ ತರ್ಜಮೆಗೊಳಿಸಿ ಮುಗಿಸುವ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.
ಜಬಲ್ಪುರಿ ಅವರು ಸರ್ಕಾರಿ ಪ್ರಾಯೋಜಿತ ನರೇಂದ್ರ ದೇವ್ ಇಂಟರ್ ಕಾಲೇಜಿನ ಉಪಪ್ರಾಂಶುಪಾಲರಾಗಿದ್ದಾರೆ. ತನ್ನ ಎಲ್ಲಾ ಸಮಯವನ್ನು ಇದೇ ಕೆಲಸಕ್ಕಾಗಿ ಮೀಸರಿಲಿಸಿದರೆ, ಇನ್ನು ಕೆಲವೇ ತಿಂಗಳಲ್ಲಿ ಅದನ್ನು ಮುಗಿಸುವ ವಿಶ್ವಾಸ ಅವರದ್ದು. ತಾನು ತನ್ನ ಕಚೇರಿ ಕೆಲಸದೊಂದಿಗೆ ಇದನ್ನು ಮಾಡಿರುವ ಕಾರಣ ಕಳೆದೈದು ವರ್ಷದಿಂದ ಕೇವಲ 40 ಶ್ಲೋಕಗಳನ್ನು ಮಾತ್ರವೇ ರೂಪಾಂತರಿಸಲು ಸಾಧ್ಯವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಜಾತಿಮತ ಧರ್ಮದ ಹಂಗಿಲ್ಲದೆ, ಕುರಾನ್, ರಾಮಾಯಣ, ಭಗವದ್ಗೀತೆ ಹಾಗೂ ಉಪನಿಶದ್‌ಗಳನ್ನು ಪ್ರಚಾರ ಮಾಡಲು ಜನತೆ ಮುಂದಾಗಬೇಕು ಎಂಬುದು ಅವರ ಅನಿಸಿಕೆ.
"ಪವಿತ್ರ ಗ್ರಂಥಗಳು ಮಾನವರು ತಾವು ತಮ್ಮ ಕುಟುಂಬ ಹಾಗೂ ಸಮಾಜದೊಂದಿಗೆ ಹೇಗೆ ವರ್ತಿಸಬೇಕು ಎಂಬ ನಿರ್ದೇಶನ ನೀಡುತ್ತದೆ. ಇದನ್ನು ಗಮನದಲ್ಲಿರಿಸಿಕೊಂಡು ವಿವಿದ ಧರ್ಮದ ಜನತೆ ಪವಿತ್ರ ಗ್ರಂಥಗಳಲ್ಲಿರುವ ಸಂದೇಶಗಳನ್ನು ಪ್ರಸಾರಕ್ಕಾಗಿ ಕೈಜೋಡಿಸಲು ಹಿಂಜರಿಯಬಾರದು" ಎಂಬುದಾಗಿ ಅವರು ಹೇಳುತ್ತಾರೆ.