ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಪತ್ರಿಕಾಗೋಷ್ಠಿಗೆ ಮಾಯಾವತಿ ಅಡ್ಡಿ (Mayawati | Rahul Gandhi | Congress)
Bookmark and Share Feedback Print
 
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಅಮೇಠಿ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರು ಇದ್ದಕ್ಕಿದ್ದಂತೆ ಅನುಮತಿ ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ರಾಹುಲ್ ಅವರ ಪತ್ರಿಕಾಗೋಷ್ಠಿ ಇಲ್ಲಿನ ರಾಜ್ಯ ಪ್ರವಾಸಿ ನಿರ್ದೇಶನಾಲಯದಲ್ಲಿ ಮಂಗಳವಾರ ನಿಗದಿಯಾಗಿತ್ತು. ಈ ಸಭಾಭವನದ ಬಳಕೆಗಾಗಿ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಪಾವತಿಯನ್ನೂ ಮಾಡಿತ್ತು.

ಪತ್ರಿಕಾಗೋಷ್ಠಿಯ ಹಿನ್ನೆಲೆಯಲ್ಲಿ ಸಭಾಭವನದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗಾಗಿ ವಿಶೇಷ ರಕ್ಷಣಾಪಡೆ(ಎಸ್ಪಿಜಿ) ಆಗಮಿಸಿದಾಗಲಷ್ಟೆ, ಪತ್ರಿಕಾಗೋಷ್ಠಿಗೆ ಅನುಮತಿ ನಿರಾಕರಿಸಿರುವ ವಿಚಾರ ಬೆಳಕಿಗೆ ಬಂದಿತ್ತು. ಎಸ್ಪಿಜಿ ಅಧಿಕಾರಿಗಳು ಅನುಮತಿ ರದ್ದಾಗಿರುವ ವಿಚಾರ ತಿಳಿಸಿದ್ದು, ಪರ್ಯಾಯ ಸ್ಥಳದ ಆಯ್ಕೆ ಮಾಡಬೇಕಾಗಿದೆ ಎಂಬುದಾಗಿ ಯುಪಿಸಿಸಿ ವಕ್ತಾರ ಸುಬೋಧ್ ಶ್ರೀವಾತ್ಸವ ಹೇಳಿದ್ದಾರೆ.

ಅದಾಗ್ಯೂ ಇದಕ್ಕೆ ಯಾವುದೇ ಕಾರಣ ನೀಡಲು ಪ್ರವಾಸೋದ್ಯಮ ಅಧಿಕಾರಿಗಳು ನಿರಾಕರಿಸಿದ್ದಾರೆ. ಆದರೆ, ಸಭಾಭವನದ ಮಂಜೂರಾತಿಗೂ ಅಥವಾ ರದ್ದತಿಗೂ, ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಇದು ನಿರ್ದೇಶನಾಲಯದ ವ್ಯಾಪ್ತಿಗೆ ಬಿಟ್ಟ ವಿಚಾರ ಎಂಬುದಾಗಿ ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿ ವಿ.ಎಸ್.ಪಾಂಡೆ ಹೇಳಿದ್ದಾರೆ.

ರಾಹುಲ್ ಗಾಂಧಿ ಸೋಮವಾರದಿಂದ ಎರಡು ದಿನಗಳ ಕಾಲದ ಉತ್ತರಪ್ರದೇಶ ಪ್ರವಾಸ ಹಮ್ಮಿಕೊಂಡಿದ್ದಾರೆ. ಪಕ್ಷಕ್ಕೆ ಸದಸ್ಯತ್ವದ ನೇಮಕ ಹಾಗೂ ಯುವದಳಕ್ಕೆ ಪುನಶ್ಚೇತನ ಅವರ ಈ ಪ್ರವಾಸದ ಉದ್ದೇಶವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ