ಬಾಬರಿ ಮಸೀದಿ ಧ್ವಂಸ ಪ್ರಕರಣ ಕುರಿತಂತೆ ಲಿಬರ್ಹಾನ್ ಆಯೋಗ ನೀಡಿರುವ ವರದಿ ಬಗ್ಗೆ ಸೋಮವಾರ ಸಂಸತ್ ಅಧಿವೇಶನದಲ್ಲಿ ಆರಂಭಗೊಂಡ ಚರ್ಚೆಯ ವೇಳೆಯಲ್ಲಿ ಭಾರತೀಯ ಜನತಾ ಪಕ್ಷ ತೀವ್ರ ವಾಗ್ದಾಳಿ ನಡೆಸಿತ್ತಲ್ಲದೆ, ಲಿಬರ್ಹಾನ್ ವರದಿ ಸಂಪೂರ್ಣ ತಪ್ಪುಗಳಿಂದ ಕೂಡಿದ್ದಲ್ಲದೆ,ಸತ್ಯಕ್ಕೆ ಬಹಳಷ್ಟು ದೂರವಾಗಿದೆ ಎಂದು ದೂಷಿಸಿದೆ.
ಲೋಕಸಭೆಯಲ್ಲಿ ಇಂದು ಲಿಬರ್ಹಾನ್ ವರದಿ ಕುರಿತಂತೆ ಸಿಪಿಐನ ಗುರುದಾಸ್ ದಾಸ್‌ಗುಪ್ತಾ ವಾಗ್ದಾಳಿ ನಡೆಸಿದ ನಂತರ ಮಾತನಾಡಿದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ವರದಿ ಸಂಪೂರ್ಣವಾಗಿ ಸತ್ಯವನ್ನು ಮುಚ್ಚಿಟ್ಟಿದೆ ಮತ್ತು ಇದೊಂದು ರಾಜಕೀಯ ಅಜೆಂಡಾದಂತೆ ಸಿದ್ದಪಡಿಸಲಾಗಿದೆ.
1992 ಡಿಸೆಂಬರ್ 6ರಂದು ನಡೆದಿರುವ ಮಸೀದಿ ಧ್ವಂಸ ಪ್ರಕರಣ ಪೂರ್ವಯೋಜಿತವಾಗಿ ನಡೆಸಿದ ಕೃತ್ಯವಲ್ಲ ಎಂದು ದಾಸ್‌ಗುಪ್ತಾ ಅವರ ಆರೋಪವನ್ನು ಸಾರಸಗಟಾಗಿ ಸಿಂಗ್ ತಳ್ಳಿಹಾಕಿದರು. ಅಯೋಧ್ಯೆಯಲ್ಲಿ ನೆರೆದಿದ್ದ ಲಕ್ಷಾಂತರ ಸಾರ್ವಜನಿಕರ ಆಕ್ರೋಶಕ್ಕೆ ಮಸೀದಿ ಧ್ವಂಸಗೊಂಡಿರುವುದಾಗಿ ಸಮರ್ಥನೆ ನೀಡಿದರು.
ಅಲ್ಲದೆ, ಲಿಬರ್ಹಾನ್ ವರದಿಯುದ್ದಕ್ಕೂ ಬಾಬರಿ ಮಸೀದಿ ಕಾಂಪ್ಲೆಕ್ಸ್ ಎಂದೇ ಉಲ್ಲೇಖಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜನಾಥ್ ಸಿಂಗ್, ವಿವಾದಿತ ಪ್ರದೇಶವನ್ನು ಬಾಬರಿ ಮಸೀದಿ ರಾಮಜನ್ಮಭೂಮಿ ಕಾಂಪ್ಲೆಕ್ಸ್ ಎಂದೇ ಕಾನೂನಿನ್ವಯ ಈ ಹಿಂದೆ ಉಲ್ಲೇಖಿಸಲಾಗಿದೆ. ಆದರೂ ಲಿಬರ್ಹಾನ್ ಬಾಬರಿ ಮಸೀದಿ ಕಾಂಪ್ಲೆಕ್ಸ್ ಎಂದು ಉಲ್ಲೇಖಿಸಿದ್ದಾರೆ ಎಂದು ಹರಿಹಾಯ್ದರು.