ಅಕ್ರಮ ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಅವರ ಬಡ್ತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ (ಸಿಜೆಐ) ಕೆ.ಜೆ.ಬಾಲಕೃಷ್ಣನ್ ಅವರು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ರಾಜ್ಯಸಭೆಗೆ ತಿಳಿಸಿದ್ದಾರೆ.
ಅಕ್ರಮ ಭೂ ಕಬಳಿಕೆ ವಿವಾದ ಎದುರಿಸುತ್ತಿರುವ ದಿನಕರನ್ ಅವರು ಕಲಾಪದಲ್ಲಿ ಭಾಗವಹಿಸಬಾರದು ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ನೀಡಬಾರದೆಂದು ಹಿರಿಯ ವಕೀಲರು ಆಗ್ರಹಿಸಿದ್ದರು. ಏತನ್ಮಧ್ಯೆ ಬಡ್ತಿ ನೀಡಬಹುದು ಎಂದು ಸುಪ್ರೀಂಕೋರ್ಟ್ ಸಮಿತಿಯ ತೀರ್ಮಾನವನ್ನು ಸರ್ಕಾರ ತಿರಸ್ಕರಿಸಿ ಮರುಪರಿಶೀಲಿಸುವಂತೆ ಕಡತವನ್ನು ಸಮಿತಿಗೆ ವಾಪಸ್ ಮಾಡಿತ್ತು.
ಸೋಮವಾರ ರಾಜ್ಯ ಹೈಕೋರ್ಟ್ ಕಲಾಪವನ್ನು ದಿನಕರನ್ ಅವರು ದಿಢೀರ್ ರದ್ದುಗೊಳಿಸಿದ್ದರು. ಅಲ್ಲದೇ, ತಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸುವುದಾಗಿ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಆ ನಿಟ್ಟಿನಲ್ಲಿ ದಿನಕರನ್ ಅವರ ಹಣಿಬರಹವನ್ನು ಸುಪ್ರೀಂಕೋರ್ಟ್ ಸಮಿತಿ ಶೀಘ್ರದಲ್ಲೇ ಅಂತಿಮಗೊಳಿಸಲಿದೆ.