ಮುಂಬೈ ದಾಳಿಯ ಫಿತೂರಿಯಲ್ಲಿ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವುದ್ ಗಿಲಾನಿಯ ಕೈವಾಡವಿದೆ ಎಂಬ ಸುಳಿವನ್ನು ಎಫ್‌ಬಿಐ ನೀಡಿರುವ ಒಂದು ದಿನದ ಬಳಿಕ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಮುಂಬೈ ಪೊಲೀಸರು ಆತನ ವಶಕ್ಕಾಗಿ ಪೂರಕ ಆರೋಪಪಟ್ಟಿಯನ್ನು ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತನಿಖಾ ಸಂಸ್ಥೆ ಹಾಗೂ ಮುಂಬೈ ಪೊಲೀಸರು ದಾಖಲೆಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಇದನ್ನು ಮುಂದಿನ ತಿಂಗಳಲ್ಲಿ ಸಲ್ಲಿಸಲಾಗುವುದು.
ಎರಡೂ ರಾಷ್ಟ್ರಗಳ ಒಪ್ಪಂದದ ಹೊರತಾಗಿಯೂ ಹೆಡ್ಲಿಯನ್ನು ಭಾರತಕ್ಕೆ ಒಪ್ಪಿಸುವುದು ಕಷ್ಟದ ವಿಚಾರವಾಗಬಹುದು ಎಂಬುದಾಗಿ ನಿರೀಕ್ಷಿಸಲಾಗಿದೆ. ಹೆಡ್ಲಿ ವಿರುದ್ಧ ಅಮೆರಿಕದಲ್ಲಿ 12 - ಅಂಶದ ಕ್ರಿಮಿನಲ್ ಫಿತೂರಿ ಆರೋಪ ಹೊರಿಸಲಾಗಿದೆ.
ಮುಂಬೈ ಭಯೋತ್ಪಾದನಾ ದಾಳಿಗೂ ಹೆಡ್ಲಿ ಹಾಗೂ ರಾಣಾಗೂ ಸಂಪರ್ಕ ಇರುವ ಕುರಿತು ತನಿಖಾಧಿಕಾರಿಗಳು ಗೃಹಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ.