ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಮರಿಗೆ ಹೆದರಿ ಓಡಿ ಬಂದ ಆಡ್ವಾಣಿ: ಕಾಂಗ್ರೆಸ್ (Atal | Congress | Liberhan Commission Report | BJP | Loksabha)
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿರುದ್ಧ ಕಾಂಗ್ರೆಸ್ ಸಂಸದರೊಬ್ಬರು ಮಂಗಳವಾರ ಸದನದಲ್ಲಿ ನಿಂದನಾತ್ಮಕ ಪದ ಪ್ರಯೋಗ ಮಾಡಿದ್ದಲ್ಲದೆ, ಪ್ರತಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಅವರು ಮುಸ್ಲಿಮರಿಗೆ ಹೆದರಿ ಪಾಕಿಸ್ತಾನದಿಂದ ಓಡಿಬಂದರು ಎಂದು ಟೀಕಿಸಿದ ಹಿನ್ನೆಲೆಯಲ್ಲಿ ಕೆರಳಿದ ಬಿಜೆಪಿ ಮತ್ತು ಮಿತ್ರಕೂಟವು, ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸಿತಲ್ಲದೆ, ಮೂರು ಬಾರಿ ಲೋಕಸಭೆ ಮುಂದೂಡಿಕೆಗೂ ಕಾರಣವಾಯಿತು.
ಲಿಬರ್ಹಾನ್ ಆಯೋಗ ವರದಿ ಚರ್ಚೆ ನಡೆಯುತ್ತಿದ್ದ ಸಂದರ್ಭ ಕಾಂಗ್ರೆಸ್ ಸಂಸದ ಬೇನಿ ಪ್ರಸಾದ್ ವರ್ಮಾ ಅವರು ಅಟಲ್ ವಿರುದ್ಧ ನಿಂದನಾತ್ಮಕ ಪದ ಬಳಸಿದಾಗ ಎನ್‌ಡಿಎ ಸದಸ್ಯರು ಕೆರಳಿದರು ಮತ್ತು ಈ ಕುರಿತು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.
ಸ್ಪೀಕರ್ ಮೀರಾ ಕುಮಾರ್ ಅವರು ಈ ಪದಗಳನ್ನು ಕಡತದಿಂದ ತಗೆದುಹಾಕಲು ಆದೇಶಿಸಿದರು ಮತ್ತು ವರ್ಮಾ ಪರವಾಗಿ ಗೃಹ ಸಚಿವ ಪಿ.ಚಿದಂಬರಂ ಕ್ಷಮೆಯನ್ನೂ ಯಾಚಿಸಿದರು. ಆದರೆ ಇದರಿಂದ ತೃಪ್ತರಾಗದ ಎನ್‌ಡಿಎ ಸದಸ್ಯರು ಗದ್ದಲ ಎಬ್ಬಿಸಿದಾಗ ಸದನವನ್ನು ಮುಂದೂಡಬೇಕಾಯಿತು.
ವರ್ಮಾ ಅವರೇ ಕ್ಷಮೆ ಯಾಚಿಸಬೇಕು ಎಂಬುದು ಎನ್‌ಡಿಎ ಸದಸ್ಯರ ಒತ್ತಾಯವಾಗಿತ್ತು. ಕೊನೆಗೆ ಸ್ಪೀಕರ್ ಸೂಚನೆಯ ಅನುಸಾರ ವರ್ಮಾ ಮನಸ್ಸಿಲ್ಲದ ಮನಸ್ಸಿನಿಂದ 'ಸದನವು ಎಲ್ಲಕ್ಕಿಂತ ಶ್ರೇಷ್ಠ, ನಾನು ಅವರಿಗೆ ನೋವುಂಟು ಮಾಡಿದ್ದರೆ ನಾನು ವಿಷಾದಿಸುತ್ತೇನೆ' ಎಂದರು. ಆದರೆ ವರ್ಮಾ ವಿಷಾದ ಬೇಕಾಗಿಲ್ಲ, ಕ್ಷಮೆಯನ್ನೇ ಯಾಚಿಸಬೇಕು ಎಂದು ಸಂಸದರು ಪಟ್ಟು ಹಿಡಿದರು.
'ಮುಸ್ಲಿಮರಿಗೆ ಹೆದರಿ ಓಡಿ ಬಂದ ಆಡ್ವಾಣಿ' ಚರ್ಚೆಯ ಸಂದರ್ಭದಲ್ಲಿ ವರ್ಮಾ, ಪ್ರತಿಪಕ್ಷ ನಾಯಕ ಆಡ್ವಾಣಿ ಅವರನ್ನೂ ಬಿಡಲಿಲ್ಲ. 'ಶ್ರೀ ರಾಮನ ಜನ್ಮ ಸ್ಥಾನದ ಬಗ್ಗೆ ಚರ್ಚಿಸಲು ಆಡ್ವಾಣಿ ಅವರಿಗೆ ಯಾವುದೇ ಹಕ್ಕಿಲ್ಲ. ಅವರೆಲ್ಲಿ ಹುಟ್ಟಿದ್ದೆಂಬುದು ಅವರಿಗೆ ಅರಿವಿದೆಯೇ? ಮುಸ್ಲಿಮರಿಗೆ ಹೆದಹರಿ ಆಡ್ವಾಣಿ ಭಾರತಕ್ಕೆ ಓಡಿ ಬಂದರು' ಎಂದು ನಿಂದಿಸಿದರು.
ಇದು ಕೂಡ ಬಿಜೆಪಿ ಸಂಸದರನ್ನು ಕೆರಳಿಸಿತು. ಚರ್ಚೆಗೆ ಗೃಹ ಸಚಿವರು ಉತ್ತರ ಕೊಡುತ್ತಿದ್ದ ಸಂದರ್ಭವಿಡೀ ಎನ್‌ಡಿಎ ಸದಸ್ಯರು ಸದನದ ವೇದಿಕೆಯ ಬಳಿ ಕುಳಿತು, ಘೋಷಣೆ ಕೂಗುತ್ತಲೇ ಇದ್ದರು.