ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಡುತ್ತಿರುವ ತೆಲಂಗಾಣ ರಾಷ್ಟ್ರಸಮಿತಿ(ಟಿಆರ್ಎಸ್)ಯು ತನ್ನ ಹೋರಾಟವನ್ನು ತೀವ್ರಗೊಳಿಸಿದ್ದು, ಒಂದೆಡೆ ಆಂಧ್ರಪ್ರದೇಶ ಹೊತ್ತಿ ಉರಿಯುತ್ತಿದ್ದರೆ, ಮತ್ತೊಂದೆಡೆ ಚಂದ್ರಶೇಖರ್ ರಾವ್ ಅವರ ಉಪವಾಸ ಸತ್ಯಾಗ್ರಹ 11ದಿನಕ್ಕೆ ಕಾಲಿಟ್ಟಿದೆ.
ವಿದ್ಯಾರ್ಥಿಸಂಘಟನೆಗಳು ಬುಧವಾರ ಅಸ್ಸೆಂಬ್ಲಿ ಚಲೋ ಚಳುವಳಿ ಹಮ್ಮಿಕೊಂಡಿರುವ ಕಾರಣ ಈ ಪ್ರದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಹಾಸ್ಟೇಲುಗಳನ್ನು ಆಂಧ್ರ ಪ್ರದೇಶ ಸರ್ಕಾರ ಮುಚ್ಚಿದೆ.
10 ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ತೆಲಂಗಾಣ ಬೇಡಿಕೆ ಪ್ರತಿಭಟನಾ ನಿರತರನ್ನು ತಡೆಯಲು ಯತ್ನಿಸಲಾಗಿದೆ. ಹೈದರಾಬಾದ್ ಸೇರಿದಂತೆ ಹೈದರಾಬಾದ್ ಪ್ರಾಂತ್ಯದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, 8000 ಪೊಲೀಸರು, ಕ್ಷಿಪ್ರ ಕಾರ್ಯಪಡೆ ಹಾಗೂ ಕೇಂದ್ರ ಮೀಸಲಾತಿ ಪಡೆಗಳನ್ನು ಈ ಪ್ರಾಂತ್ಯದಲ್ಲಿ ನಿಯೋಜಿಸಲಾಗಿದೆ.
ತೆಲಂಗಾಣ ಪ್ರತಿಭಟನಾಕಾರರು ಹೈದರಾಬಾದ್ ಪ್ರವೇಶಿಸುವುದನ್ನು ತಡೆಯಲು ಎಲ್ಲಾ ಪ್ರವೇಶ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.
ಕೆಸಿಆರ್ ಸ್ಥಿರ ಈ ಮಧ್ಯೆ ಪ್ರತ್ಯೇಕ ರಾಜ್ಯದ ಬೇಡಿಕೆಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿರುವ ಟಿಆರ್ಎಸ್ ಮುಖಂಡ ಕೆ. ಚಂದ್ರಶೇಖರ ರಾವ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದರೂ ದಿನೇದಿನೇ ಕುಸಿಯುತ್ತಿದೆ ಎಂಬುದಾಗಿ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಉಪವಾಸದಿಂದಾಗಿ ಅವರ ರೋಗನಿರೋಧಕ ಶಕ್ತಿ ಕುಸಿದಿದೆ ಎಂದು ಅವರು ಹೇಳಿದ್ದಾರೆ.
ಕೆಸಿಆರ್ ಅವರ ಆರೋಗ್ಯ ಕುಸಿಯುತ್ತಿದ್ದು ಇದು ಕಾಂಗ್ರೆಸ್ ಮೇಲೆ ತೀವ್ರ ಒತ್ತಡ ಬೀರಿದ್ದು, ಆಂಧ್ರ ಮುಖ್ಯಮಂತ್ರಿ ರೋಸಯ್ಯ ಅವರು ಈ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚಿಸಲು ಬುಧವಾರ ನವದೆಹಲಿಗೆ ತೆರಳಲಿದ್ದಾರೆ. ಈ ಸಮಸ್ಯೆ ಪರಿಹಾರಕ್ಕಾಗಿ ಸೋನಿಯಾ ಉನ್ನತ ಮಟ್ಟದ ಸಭೆಯನ್ನು ಕರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.