ಇದು ಕೊಂಚ ವಿಶಿಷ್ಠ. ಆದರೂ ನಿಜ. ವಿಷಯ ಏನಂದ್ರೆ, ಸಾಮಾನ್ಯ ವರದಕ್ಷಿಣೆ ಪ್ರಕರಣಗಳಿಗೆ ಉಲ್ಟಾ ಎಂಬಂತೆ, ವ್ಯಕ್ತಿಯೊಬ್ಬ ವರದಕ್ಷಿಣೆ ಕೊಟ್ಟಿದ್ದೇನೆಂದು ದೂರಿರುವ ತನ್ನ ಪತ್ನಿಯ ವಿರುದ್ಧವೇ ಪ್ರಕರಣ ದಾಖಲಿಸುವಂತೆ ಜಿಲ್ಲಾ ನ್ಯಾಯಾಲಯಕ್ಕೆ ತೆರಳಿರುವ ವಿಚಾರದ ಕುರಿತು ವರದಿಯಾಗಿದೆ.
ಚಂಡೀಗಢದ ಅಟ್ಟಾವ ಜಿಲ್ಲೆಯ ರವೀಂದರ್ ಸಿಂಗ್ ಧಂಜು ಎಂಬಾತ ತನ್ನ ಪತ್ನಿ ಬಲ್ಜಿಂದರ್ ಕೌರ್ ಹಾಗೂ ಆಕೆಯ ಮನೆಯವರ ವಿರುದ್ಧ ವರದಕ್ಷಿಣೆ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸುವಂತೆ ನ್ಯಾಯಾಲಯದ ನಿರ್ದೇಶನ ಕೋರಿ ದೂರು ನೀಡಿದ್ದಾನೆ.
ಇದಕ್ಕೂ ಮುಂಚೆ 2008ರ 29ರಂದು ರವೀಂದರ್ ಹಾಗೂ ಆತನ ಮನೆಯವರ ವಿರುದ್ಧ ಹಿಸ್ಸಾರ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ತಡೆಕಾಯ್ದೆಯನ್ವಯ ಪತ್ನಿ ಪ್ರಕರಣ ದಾಖಲಿಸಿದ್ದಳು. ಇದೀಗ ತನ್ನಮೇಲೆ ಬಿಟ್ಟಿರುವ ಬಾಣವನ್ನೇ ತನ್ನ ಪತ್ನಿ ಹಾಗೂ ಆಕೆಯ ಮನೆಯವರ ವಿರುದ್ಧ ತಿರುಗಿಸಲು ಮುಂದಾಗಿರುವ ರವೀಂದರ್, ವರದಕ್ಷಿಣೆ ತಡೆ ಕಾಯ್ದೆಯ ಸೆಕ್ಷನ್ 3ರ ಪ್ರಕಾರ ಸುಶಿಕ್ಷಿತ ಮಹಿಳೆಯೊಬ್ಬಳು ವರದಕ್ಷೆಣೆ ಬೇಡಿಕೆಯ ನಡುವೆಯೂ ವಿವಾಹವಾಗಲು ಮುಂದಾದರೆ, ಆಕೆ ಹಾಗೂ ಆಕೆಯ ಮನೆಯವರೂ ಅಪರಾಧದಲ್ಲಿ ಬಾಗಿ ಎಂಬುದನ್ನು ಪತ್ನಿಯ ವಿರುದ್ಧ ತಿರುಗಿ ಬಿಡಲು ಮುಂದಾಗಿದ್ದಾನೆ.
ಹಿಸ್ಸಾರ್ ಪೊಲೀಸರು ವರದಕ್ಷಿಣೆ ಕೊಡುವುದೂ ಸಹ ಸಮಾನವಾಗಿ ಅಪರಾಧ ಎಂಬ ಅಂಶವನ್ನು ನಿರ್ಲಕ್ಷಿಸಿದ್ದಾರೆ ಎಂದು ದೂರಿರುವ ರವೀಂದರ್ ವಕೀಲ ಟಿ.ಎಸ್. ಸೂಡಾನ್ ಎಫ್ಐಆರ್‌ನಲ್ಲಿ ದಾಖಲಾಗಿರುವ ಕೌರ್ ಹಾಗೂ ಇತರರ ಹೇಳಿಕೆಗಳನ್ನು ತಪ್ಪೊಪ್ಪಿಗೆ ಎಂದು ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹಿಸ್ಸಾರ್ ನಿವಾಸಿಯಾಗಿರುವ ಕೌರ್‌ಳನ್ನು ರವೀಂದರ್ ಡಿಸೆಂಬರ್ 2004ರಲ್ಲಿ ವಿವಾಹವಾಗಿದ್ದು ಈ ದಂಪತಿಗಳಿಗೆ ಒಂದು ಗಂಡು ಮಗುವೂ ಇದೆ. ಕೌರ್ ಪತಿಯ ವಿರುದ್ಧದ ತನ್ನ ದೂರಿನಲ್ಲಿ ಮದುವೆಗಾಗಿ 18ರಿಂದ 19 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಮತ್ತು ರವೀಂದರ್ ಹಾಗೂ ಆತನ ಮನೆಯವರಿಗೆ ವರದಕ್ಷಿಣೆಯಾಗಿ ನೀಡಿರುವ ವಸ್ತುಗಳ ಪಟ್ಟಿಯನ್ನೂ ನೀಡಿದ್ದರು.
ರವೀಂದರ್ ದೂರನ್ನು ಸ್ವೀಕರಿಸಿರುವ ನ್ಯಾಯಾಧೀಶರು ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂಬರುವ ಜನವರಿ 19ರಂದು ನಿಗದಿ ಮಾಡಿದ್ದಾರೆ.