ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೊನೆಗೂ ಪ್ರತ್ಯೇಕ ತೆಲಂಗಾಣಕ್ಕೆ ಕೇಂದ್ರ ಅಸ್ತು (Manmohan Singh | Telangana State | K Chandrashekhar Rao | Hyderabad | TRS)
ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಆಗ್ರಹಿಸಿ ಕಳೆದ 11ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಟಿಆರ್‌ಎಸ್ ಮುಖ್ಯಸ್ಥ ಚಂದ್ರಶೇಖರ್ ರಾವ್ ಅವರ ಹೋರಾಟಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮಣಿದಿದ್ದು, ಪ್ರತ್ಯೇಕ ತೆಲಂಗಾಣ ರಚನೆಗೆ ಕೇಂದ್ರ ಅಸ್ತು ಎಂದಿದೆ.
ಪ್ರತ್ಯೇಕ ತೆಲಂಗಾಣ ರಚನೆಗೆ ಕೇಂದ್ರ ಸರ್ಕಾರ ಬುಧವಾರ ರಾತ್ರಿ ಗ್ರೀನ್ ಸಿಗ್ನಲ್ ನೀಡುವ ಮೂಲಕ ಚಂದ್ರಶೇಖರ ರಾವ್ ಅವರ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು. ತೆಲಂಗಾಣ ರಾಜ್ಯ ರಚನೆಗೆ ಪೂರಕವಾದ ನಿರ್ಣಯವನ್ನು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಅಂಗೀಕರಿಸಲಾಗುವುದು ಎಂದು ನಿನ್ನೆ ತಡರಾತ್ರಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಹೇಳಿಕೆ ನೀಡಿದ್ದು, ಇದರಿಂದಾಗಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ವೇದಿಕೆ ಸಿದ್ದವಾದಂತಾಗಿದೆ.
ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ಟಿಆರ್‌ಎಸ್ ವರಿಷ್ಠ ಚಂದ್ರಶೇಖರ ರಾವ್ ಕಳೆದ 11ದಿನಗಳಿಂದ ಪಟ್ಟುಬಿಡದೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು, ಅಲ್ಲದೆ, ತೆಲಂಗಾಣ ಸೇರಿದಂತೆ ಹೈದರಬಾದ್ ಭಾಗಗಳಲ್ಲಿ ಪ್ರತಿಭಟನೆಯ ಕಿಚ್ಚು ಸಾಕಷ್ಟು ಹಿಂಸಾಚಾರಕ್ಕೆ ಕಾರಣವಾಗಿತ್ತು.
ಆ ಹಿನ್ನೆಲೆಯಲ್ಲಿ ಬುಧವಾರ ಸಂಸತ್ ಕಲಾಪದಲ್ಲಿಯೂ ಎಡಪಕ್ಷ, ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳು ಕೂಡ ಚಂದ್ರಶೇಖರ್ ರಾವ್ ಅವರ ಬೇಡಿಕೆಗೆ ಬೆಂಬಲ ಸೂಚಿಸಿ, ಈ ಬಗ್ಗೆ ಪ್ರಧಾನಿ ಶೀಘ್ರವೇ ಮಧ್ಯಪ್ರವೇಶಿಸಿ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದ್ದವು.
ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಹಿರಿಯ ಮುಖಂಡರು, ಕೇಂದ್ರ ಸಚಿವರು ಬುಧವಾರ ರಾತ್ರಿ ಪ್ರತ್ಯೇಕ ತೆಲಂಗಾಣ ರಚನೆಗೆ ಸಂಬಂಧಿಸಿದಂತೆ ಎರಡು ಸುತ್ತಿನ ಮಾತುಕತೆ ನಡೆಸಿ ತೀರ್ಮಾನ ಕೈಗೊಂಡ ನಂತರ, ಪ್ರತ್ಯೇಕ ತೆಲಂಗಾಣ ರಚನೆ ಕುರಿತು ಚಿದಂಬರಂ ಸರ್ಕಾರ ನಿಲುವನ್ನು ಘೋಷಿಸಿದರು.
ಆ ನಿಟ್ಟಿನಲ್ಲಿ ತೆಲಂಗಾಣ ದೇಶದ 29ನೇ ರಾಜ್ಯವಾಗಿ ತಲೆಎತ್ತಲಿದೆ. ಆದರೆ ಮುತ್ತಿನ ನಗರಿ ಹೈದರಾಬಾದ್ ಭವಿಷ್ಯ ಏನು ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ಆರಂಭವಾಗಿದೆ. ಕೆಲವು ವರ್ಷಗಳಿಂದ ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆಗಾಗಿ ಸಾಕಷ್ಟು ಹೋರಾಟ ನಡೆದಿದ್ದರು ಕೂಡ ಯಾವುದೇ ಫಲ ನೀಡಿರಲಿಲ್ಲವಾಗಿತ್ತು. ಅಂತೂ ಕೊನೆಗೂ ಕೆಸಿಆರ್ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕೇಂದ್ರ ಸರ್ಕಾರ ಮಣಿದು, ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಾಗಿರುವುದು ತೆಲಂಗಾಣ ಜನರಲ್ಲಿ ಸಂತೋಷ ತಂದಂತಾಗಿದೆ.