ತೆಲಂಗಾಣ: ಆಂಧ್ರ ತಲ್ಲಣ, 60ಕ್ಕೂ ಹೆಚ್ಚು ಶಾಸಕರ ರಾಜೀನಾಮೆ
ಹೈದರಾಬಾದ್, ಗುರುವಾರ, 10 ಡಿಸೆಂಬರ್ 2009( 15:01 IST )
ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆಯ ಕುರಿತ ಕೇಂದ್ರದ ನಿರ್ಧಾರವು ಆಂಧ್ರ ಪ್ರದೇಶದ ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸಿದ್ದು, ಕಾಂಗ್ರೆಸ್, ತೆಲುಗುದೇಶಂ, ಪ್ರಜಾರಾಜ್ಯಂ ಪಕ್ಷಗಳ ಸುಮಾರು 60ರಷ್ಟು ಶಾಸಕರು ಮತ್ತು 3 ಮಂದಿ ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ರೋಸಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪತನದಂಚಿನಲ್ಲಿದೆ.
ಕರಾವಳಿಯ ರಾಯಲ್‌ಸೀಮೆ ಪ್ರದೇಶಕ್ಕೆ ಸೇರಿದ ಈ ಎಲ್ಲ ಶಾಸಕರು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ಒಪ್ಪಿಸಿದ್ದಾರೆ. ಆದರೆ, ಸ್ಪೀಕರ್ ಕಿರಣ್ ಕುಮಾರ್ ರೆಡ್ಡಿ ಅವರಿನ್ನೂ ಈ ರಾಜೀನಾಮೆಗಳನ್ನು ಸ್ವೀಕರಿಸಿಲ್ಲ.
294 ಸದಸ್ಯ ಬಲದ ಆಂಧ್ರ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 158 ಶಾಸಕರಿದ್ದಾರೆ. ಇದು ಬಹುಮತಕ್ಕಿಂತ ಕೇವಲ 10 ಹೆಚ್ಚು.
ಆಂಧ್ರ ಪ್ರದೇಶವನ್ನು ವಿಭಜಿಸುವ ಕಾಂಗ್ರೆಸ್ ಹೈಕಮಾಂಡ್‌ನ "ಏಕ ಪಕ್ಷೀಯ" ನಿರ್ಧಾರದ ವಿರುದ್ಧ ಆಂಧ್ರ ಕಾಂಗ್ರೆಸ್ ಮುಖಂಡರು ಕೆಂಡಾಮಂಡಲರಾಗಿದ್ದಾರೆ. ವಿಶೇಷವೆಂದರೆ, ತೆಲಂಗಾಣ ರಾಜ್ಯ ಸ್ಥಾಪನೆಯಾದಲ್ಲಿ, ಆಂಧ್ರದ ರಾಜಧಾನಿ ಹೈದರಾಬಾದ್ ಕೂಡ ಅದರ ವ್ಯಾಪ್ತಿಗೆ ಬರುತ್ತಿದೆ.
"ಈ ನಿರ್ಧಾರ ನಮಗೆ ನಿಜಕ್ಕೂ ನೋವು ತಂದಿದೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಜನರು ತಮ್ಮ ಜೀವನೋಪಾಯಕ್ಕಾಗಿ ಹೈದರಾಬಾದಿಗೆ ಬಂದು ನೆಲಸಿದ್ದಾರೆ. ಈಗ ರಾಜ್ಯ ವಿಭಜನೆಯಾದರೆ ಅವರ ಗತಿಯೇನಾಗುತ್ತದೆ" ಎಂದು ಕೃಷ್ಣಾ ಜಿಲ್ಲೆಯ ಕಾಂಗ್ರೆಸ್ ಶಾಸಕ ಪಿ.ವೆಂಕಟ್ರಾಮಯ್ಯ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದಾರೆ.
ಟಿಡಿಪಿಯಿಂದ ಮತ್ತಷ್ಟು ಶಾಸಕರು ಪದತ್ಯಾಗ ಮಾಡಲು ನಿರ್ಧರಿಸಿದ್ದಾರಾದರೂ, ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಕಾದು ನೋಡುವಂತೆ ಸೂಚಿಸಿದ್ದಾರೆ ಎಂದು ಎಂಎಲ್‌ಸಿ ಪದವಿಗೆ ರಾಜೀನಾಮೆ ನೀಡಿರುವ ಟಿಡಿಪಿಯ ಎನ್.ರಾಜಕುಮಾರಿ ತಿಳಿಸಿದ್ದಾರೆ.
ಕಾಂಗ್ರೆಸ್‌ನ ವಿಜಯವಾಡ ಸಂಸದ ಲಗಡಪತಿ ರಾಜಗೋಪಾಲ್ ಕೂಡ ಈಗಾಗಲೇ ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸ್ಪೀಕರ್ ಮೀರಾ ಕುಮಾರ್‌ಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಆಂಧ್ರ ಕರಾವಳಿ ಮತ್ತು ರಾಯಲಸೀಮೆ ಪ್ರದೇಶದ ಮತ್ತಷ್ಟು ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಿಡಿಪಿ ರಾಜ್ಯಸಭಾ ಸದಸ್ಯ ಮೈಸೋರಾ ರೆಡ್ಡಿ ಕೂಡ ಪದವಿಗೆ ರಾಜೀನಾಮೆ ನೀಡಿದ್ದಾರೆ.