ವೇಶ್ಯಾವಾಟಿಕೆಯನ್ನು ತಡೆಯಲಾಗದಿದ್ದರೆ ಅದನ್ನು ಕಾನೂನುಬದ್ಧಗೊಳಿಸಲು ಸಾಧ್ಯವೇ ಎಂಬುದಾಗಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ.
"ನೀವಿದನ್ನು ವಿಶ್ವದ ಅತ್ಯಂತ ಹಳೆಯ ಕಸುಬು ಎನ್ನುತ್ತೀರಿ. ಇದನ್ನು ತಡೆಯುವ ಕಾನೂನು ತರಲಾಗದಿದ್ದರೆ, ಇದನ್ನ್ಯಾಕೆ ಕಾನೂನುಬದ್ಧಗೊಳಿಸಬಾರದು? ಹೀಗಾದಾಗ, ಈ ವ್ಯವಹಾರವನ್ನು ಪರಿಶೀಲನೆ ನಡೆಸಬಹುದು ಮತ್ತು ಇದರಲ್ಲಿ ಒಳಗೊಂಡವರಿಗೆ ವೈದ್ಯಕೀಯ ಸಹಾಯ ನೀಡಬಹುದು" ಎಂಬುದಾಗಿ ನ್ಯಾಯಮೂರ್ತಿಗಳಾದ ದಲ್ವೀರ್ ಭಂಡಾರಿ ಮತ್ತು ಎ.ಕೆ. ಪಟ್ನಾಯಕ್ ಅವರನ್ನೊಳಗೊಂಡ ನ್ಯಾಯಪೀಠ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಮ್ ಅವರಿಗೆ ಹೇಳಿದೆ.
ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ ಮೂಲಕ ಮಹಿಳಾ ಕಳ್ಳಸಾಗಣಿಕೆಯನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯಿಸಿದ ನ್ಯಾಯಪೀಠವು, ವಿಶ್ವದ ಎಲ್ಲಿಯೂ ವೇಶ್ಯಾವಾಟಿಕೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳಿಲ್ಲ ಎಂಬುದನ್ನು ಬೆಟ್ಟುಮಾಡಿತು.
ನ್ಯಾಯಪೀಠದ ಸಲಹೆಯ ಬಗ್ಗೆ ಗಮನಹರಿಸುವುದಾಗಿ ಸುಬ್ರಮಣಿಯನ್ ಹೇಳಿದರು.
ಬಚ್‌ಪನ್ ಬಚಾವೋ ಆಂದೋಲನ ಎನ್‌ಜಿಓ ಒಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ವೇಳೆಗೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.