ಲಿಬರ್ಹಾನ್ ವರದಿ ಬಂಗಾಳಿ ಕೊಲ್ಲಿಗೆ ಬಿಸಾಕಿ: ಬಿಜೆಪಿ ಕಿಡಿ
ರಾಜ್ಯಸಭೆಯಲ್ಲಿ ಕೋಲಾಹಲವೆಬ್ಬಿಸಿದ ಲಿಬರ್ಹಾನ್ ವರದಿ...
ನವದೆಹಲಿ, ಶುಕ್ರವಾರ, 11 ಡಿಸೆಂಬರ್ 2009( 09:07 IST )
ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತು ತನಿಖೆ ನಡೆಸಿ ನೀಡಿದ್ದ ಲಿಬರ್ಹಾನ್ ವರದಿ ವಿರುದ್ಧ ಗುರುವಾರ ರಾಜ್ಯಸಭೆಯಲ್ಲಿ ಚರ್ಚೆ ನಡೆಯುವ ಮೂಲಕ ಸಾಕಷ್ಟು ಕೋಲಾಹಲಕ್ಕೆ ಎಡೆಮಾಡಿಕೊಟ್ಟಿತ್ತು. ಬಾಬರಿ ಧ್ವಂಸದಿಂದ ಭಾರತ ತಲೆತಗ್ಗಿಸುವಂತಾಗಿದೆ ಎಂದು ಹೇಳಿಕೆ ನೀಡಿದ್ದನ್ನು ವಿರೋಧಿಸಿರುವ ಬಿಜೆಪಿ, ಶಿವಸೇನೆ ಪಕ್ಷದ ಸದಸ್ಯರು,ಲಿಬರ್ಹಾನ್ ವರದಿಯನ್ನು ಬಂಗಾಳ ಕೊಲ್ಲಿಗೆ ಬಿಸಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸತ್ ಕಲಾಪದಲ್ಲಿಯೂ ಸಾಕಷ್ಟು ಬಿಸಿ,ಬಿಸಿ ಚರ್ಚೆಗೆ ಕಾರಣವಾಗಿದ್ದ ಲಿಬರ್ಹಾನ್ ವರದಿ, ರಾಜ್ಯಸಭೆಯಲ್ಲಿಯೂ ಪ್ರತಿಧ್ವನಿಸಿತ್ತು. ಗುರುವಾರ ನಡೆದ ಕಲಾಪದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಈ ಸಂದರ್ಭದಲ್ಲಿ ಎಡಪಕ್ಷಗಳು ಮತ್ತು ಸಮಾಜವಾದಿ ಪಕ್ಷದ ಸದಸ್ಯರು ಧ್ವನಿಗೂಡಿಸಿದರು.
ಘಟನೆಗೆ ಸಂಬಂಧಿಸಿದಂತೆ ವರದಿಯಲ್ಲಿ ಸತ್ಯಕ್ಕೆ ದೂರವಾದ ಅಂಶಗಳೇ ಸೇರಿವೆ ಎಂದು ಕಿಡಿಕಾರಿದ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು, ಲಿಬರ್ಹಾನ್ ವರದಿಯನ್ನು ಬಂಗಾಳ ಕೊಲ್ಲಿಗೆ ಎಸೆಯಿರಿ. ಇದರ ಬಗ್ಗೆ ಸುಮ್ಮನೆ ಯಾಕೆ ಚರ್ಚೆ ಮಾಡಿ ಸಮಸ್ಯ ವ್ಯರ್ಥ ಮಾಡುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಸೇನೆಯ ಮುಖ್ಯಸ್ಥ ಮನೋಹರ್ ಜೋಷಿ ಕೂಡ, ವರದಿಯನ್ನು ಕಸದ ಬುಟ್ಟಿಗೆ ಹಾಕಿ ಎಂದು ಹೇಳಿದರು.