ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ವಿರೋಧಿಸಿ ಬಂದ್; ಭಾರೀ ಹಿಂಸಾಚಾರ ಆರಂಭ (Telangana | Andhra Pradesh | Hyderabad | Guntur)
Bookmark and Share Feedback Print
 
ತೆಲಂಗಾಣ ಪ್ರತ್ಯೇಕ ರಾಜ್ಯ ವಿವಾದ ಹಲವು ಪಕ್ಷಗಳೊಳಗೆ ಭಿನ್ನಾಭಿಪ್ರಾಯ ಹುಟ್ಟಿ ಹಾಕಿರುವುದರ ಬೆನ್ನಲ್ಲೇ ಪಕ್ಷಾತೀತ ಪ್ರತಿಭಟನೆ, ಬಂದ್, ಹಿಂಸಾಚಾರಗಳು ಆಂಧ್ರಪ್ರದೇಶದ ರಾಯಲಸೀಮೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಕಾಣಿಸಿಕೊಂಡಿದೆ.

ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡುವ ಸಂಬಂಧ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿರುವುದರ ವಿರುದ್ಧ ಜನಾಕ್ರೋಶ ಮುಗಿಲು ಮುಟ್ಟುತ್ತಿದೆ. ಹಿಂಸಾಚಾರ ಕೂಡ ಅದೇ ವೇಗದಿಂದ ಸಾಗುತ್ತಿದ್ದು, ಇದುವರೆಗೆ 12 ಬಸ್ಸುಗಳನ್ನು ಆಕ್ರೋಶಭರಿತ ಗುಂಪು ಸುಟ್ಟು ಹಾಕಿದೆ ಎಂಬ ವರದಿಗಳೂ ಬಂದಿವೆ. ಚಿತ್ತಾಪುರ ಜಿಲ್ಲೆಯ ಶ್ರೀಕಾಕುಳಂ ಎಂಬಲ್ಲಿ ಏಳು ಬಸ್ಸುಗಳು ಅಗ್ನಿಗಾಹುತಿಯಾಗಿವೆ.

ಕಡಪ ಜಿಲ್ಲೆಯ ರಾಯಚೂಪಿ ಎಂಬಲ್ಲಿ ಮೊಬೈಲ್ ಟವರುಗಳನ್ನೇರಿ ಬೆದರಿಕೆ ಹಾಕುತ್ತಿರುವ ಘಟನೆಗಳೂ ವರದಿಯಾಗಿವೆ. ಕನಿಷ್ಠ 8 ಮಂದಿ ವಿವಿಧೆಡೆ ಟವರುಗಳನ್ನೇರಿ ಆಂಧ್ರ ವಿಭಜಿಸದಂತೆ ಆಗ್ರಹಿಸುತ್ತಿದ್ದಾರೆ.

ಹಿಂಸಾಚಾರ ಆರಂಭವಾಗುತ್ತಿದ್ದಂತೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಸಂಚಾರವನ್ನು ಸ್ಥಗಿತಗೊಳಿಸಿವೆ. ಉಳಿದಂತೆ ಯಾವುದೇ ವಾಹನಗಳ ಸಂಚಾರಕ್ಕೂ ಪ್ರತಿಭಟನಾಕಾರರು ಅವಕಾಶ ನೀಡುತ್ತಿಲ್ಲ ಎಂಬ ವರದಿಗಳು ಬಂದಿವೆ.

ಮೂಲಗಳ ಪ್ರಕಾರ ಕರಾವಳಿ ನಗರ ವಿಶಾಖಪಟ್ಟಣ, ವ್ಯಾಪಾರೀ ಕೇಂದ್ರ ಗುಂಟೂರು, ವಿಜಯವಾಡಾ, ಮಚಲಿಪಟ್ಟಣಂ, ನೆಲ್ಲೂರ್, ಕರ್ನೂಲ್ ಮತ್ತು ಕಡಪ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ಬಂದ್ ನಡೆಯುತ್ತಿದೆ. ಇದಕ್ಕೆ ರಾಜಕೀಯ ನೇತಾರರು, ವಿದ್ಯಾರ್ಥಿಗಳು ಮತ್ತು ಇತರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಪಕ್ಷಗಳೊಳಗೆ ಭಿನ್ನಮತ-ರಾಜಿನಾಮೆ ಸಂಖ್ಯೆ 103ಕ್ಕೆ...
ತೆಲಂಗಾಣ ಕುರಿತ ಕೇಂದ್ರದ ನಿಲುವನ್ನು ವಿರೋಧಿಸಿ ರಾಜಿನಾಮೆ ನೀಡಿರುವ ಹಲವು ಶಾಸಕರು ಮತ್ತು ಸಂಸದರು ಇದೀಗ ವಿಭಿನ್ನ ಹಾದಿ ತುಳಿದಿದ್ದು, ಪಕ್ಷಾತೀತ ಚಿಂತನೆಗೆ ಮುಂದಾಗಿದ್ದಾರೆ.

ಇದುವರೆಗೆ ರಾಜಿನಾಮೆ ಸಲ್ಲಿಸಿರುವ ಕಾಂಗ್ರೆಸ್, ಪ್ರಜಾರಾಜ್ಯಂ ಮತ್ತು ತೆಲುಗು ದೇಶಂ ಪಕ್ಷಗಳ ಸುಮಾರು 103 ಶಾಸಕರು ಮತ್ತು ಸಂಸದರು ಒಟ್ಟಾಗೆ ಸಭೆ ನಡೆಸುವ ತೀರ್ಮಾನಕ್ಕೂ ಬಂದಿದ್ದಾರೆ.

ಈಗಾಗಲೇ ಆಂಧ್ರ ವಿಧಾನ ಸಭಾ ಕಲಾಪವನ್ನು ಮುಂದೂಡಲಾಗಿದೆ. ತೆಲಂಗಾಣ ವಿರೋಧಿ ಶಾಸಕರು ಇಂದು ಮಧ್ಯಾಹ್ನ ಹೈದರಾಬಾದ್‌ನಲ್ಲಿ ಸಭೆ ಸೇರಿ ತಮ್ಮ ನಿರ್ಣಯವನ್ನು ತೆಗೆದುಕೊಳ್ಳಲಿದ್ದಾರೆ.

ಚಂದ್ರಶೇಖರ್ ಬಿಡುಗಡೆ...
ಕಳೆದ 13 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ತೆಲಂಗಾಣ ಹೋರಾಟದ ರೂವಾರಿ ಕೆ. ಚಂದ್ರಶೇಖರ ರಾವ್ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಆಮರಣಾಂತ ಉಪವಾಸಕ್ಕೆ ಮುಂದಾಗಿದ್ದ ಅವರು ಕೆಲ ದಿನಗಳ ಹಿಂದೆ ಅಸ್ವಸ್ಥಗೊಂಡ ನಂತರ ಇಲ್ಲಿನ ನಿಜಾಮ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಅವರು ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ಭಾರೀ ಪ್ರಮಾಣದಲ್ಲಿ ಅಭಿಮಾನಿಗಳು ಅವರನ್ನು ಅಭಿನಂದಿಸಿದರು.
ಸಂಬಂಧಿತ ಮಾಹಿತಿ ಹುಡುಕಿ