ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಜೀರ್ ಮೂಲಕ ಇನ್ನಷ್ಟು ಶಂಕಿತರ ಸೆರೆ: ಕೇರಳ ಪೊಲೀಸ್
(Kerala | Laskhar-e-Taiba | T. Nazeer | Bangalore serial blasts)
ತಿರುವನಂತಪುರಂ, ಶುಕ್ರವಾರ, 11 ಡಿಸೆಂಬರ್ 2009( 13:23 IST )
ಪೊಲೀಸರ ವಶದಲ್ಲಿರುವ ಲಷ್ಕರ್ ಇ ತೋಯ್ಬಾದ ದಕ್ಷಿಣ ಭಾರತ ಮುಖ್ಯಸ್ಥ ಟಿ. ನಜೀರ್‌ನಿಂದ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಶಂಕಿತರನ್ನು ಬಂಧಿಸುವ ವಿಶ್ವಾಸವನ್ನು ಕೇರಳ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಬೆಂಗಳೂರು ಸರಣಿ ಸ್ಫೋಟದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿರುವ ಕೇರಳ ಮೂಲದ ನಜೀರ್ ಮತ್ತು ಅವನ ಸಹಚರ ಇದೀಗ ಕರ್ನಾಟಕ ಪೊಲೀಸರ ವಶದಲ್ಲಿದ್ದು, ಅವರನ್ನು ಕೇರಳ ಪೊಲೀಸರು ಕೆಲ ದಿನಗಳ ಮಟ್ಟಿಗೆ ವಶಕ್ಕೆ ತೆಗೆದುಕೊಳ್ಳಲಿದ್ದಾರೆ.
ಆರೋಪಿ ನಜೀರ್‌ನಿಂದ ಸಾಕಷ್ಟು ಮಹತ್ವದ ವಿಚಾರಗಳನ್ನು ಹೊರಗೆಳೆಯಲಾಗುತ್ತಿದ್ದು, ಆತನಿಗೆ ಸಹಾಯ ಮಾಡಿದ್ದ ಕೇರಳದ ಸ್ಥಳೀಯರನ್ನು ಮುಂಬರುವ ದಿನಗಳಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ ಎಂದು ಐಜಿಪಿ ತೋಮಿನ್ ಜೆ. ತಚೆಂಕೇರಿ ತಿಳಿಸಿದ್ದಾರೆ.
ಕೇರಳ ಪೊಲೀಸ್ ತಂಡದ ಮುಖ್ಯಸ್ಥರಾಗಿರುವ ತಚೆಂಕೇರಿಯವರು ಬೆಂಗಳೂರಿನಲ್ಲಿರುವ ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಲಿದ್ದು ಈ ಸಂಬಂಧ ಮಾಧ್ಯಮದವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ ಅವರು, ನಜೀರ್ ಮತ್ತು ಅವನ ಸಹಚರನನ್ನು ನಾವು ಕಸ್ಟಡಿಗೆ ತೆಗೆದುಕೊಂಡು ಕೇರಳಕ್ಕೆ ಕರೆ ತರಲಿದ್ದೇವೆ. ನಂತರ ಅವರು ಎಲ್ಲೆಲ್ಲಿ ತಮ್ಮ ಕಾರ್ಯಾಚರಣೆಗೆ ಯತ್ನಿಸಿದ್ದರು ಎಂಬುದನ್ನು ತಿಳಿದುಕೊಂಡು ಅಲ್ಲಿಗೆ ಕರೆದುಕೊಂಡು ಹೋಗಿ ತನಿಖೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ನಜೀರ್ ಮತ್ತು ಆತನ ಸಹಚರ ಶಾಫಾಸ್ ಎಂಬವರನ್ನು ಮೇಘಾಲಯ ಗಡಿಯಲ್ಲಿ ಕಳೆದ ವಾರ ಬಂಧಿಸಲಾಗಿತ್ತು. ನಂತರ ಅವರನ್ನು ಬಾಂಗ್ಲಾದೇಶ ಪೊಲೀಸರು ಬೆಂಗಳೂರಿಗೆ ಹಸ್ತಾಂತರಿಸಿದ್ದರು.
ನಜೀರ್ ಕಣ್ಣೂರಿನಲ್ಲಿ ಬಾಂಬ್ ತಯಾರಿಸಲು ಅಮೋನಿಯಂ ನೈಟ್ರೇಟ್ ಬಳಸಿದ್ದನ್ನು ಕೇರಳ ಪೊಲೀಸರು ಗುರುವಾರ ಪತ್ತೆ ಹಚ್ಚಿದ್ದು, ಈ ಸಂಬಂಧ ಹೆಚ್ಚಿನ ಮಾಹಿತಿಗಳನ್ನು ಇನ್ನಷ್ಟೇ ಕಲೆ ಹಾಕಬೇಕಿದೆ.