ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ಆಯ್ತು, ಈಗ ಗೂರ್ಖಾಲ್ಯಾಂಡ್ ಸರದಿ..! (Gorkhaland | Telangana | Andhra Pradesh | Darjeeling)
Bookmark and Share Feedback Print
 
ತೆಲಂಗಾಣ ಹೋರಾಟದ ಯಶಸ್ಸಿನಿಂದ ಸ್ಫೂರ್ತಿ ಪಡೆದುಕೊಂಡಿರುವ 'ಗೂರ್ಖಾ ಜನ್ಮಮುಕ್ತಿ ಮೋರ್ಚಾ' ಎಚ್ಚೆತ್ತುಕೊಂಡಿದ್ದು, ತಮಗೂ ಪ್ರತ್ಯೇಕ ರಾಜ್ಯ ಬೇಕೆಂದು ಇಂದಿನಿಂದ ಆಮರಣಾಂತ ಉಪವಾಸ ಆರಂಭಿಸಿದೆ.

ಡಿಸೆಂಬರ್ 14ರಿಂದ 96 ಗಂಟೆಗಳ ಡಾರ್ಜಲಿಂಗ್ ಬಂದ್, ಆಮರಣಾಂತ ಉಪವಾಸ ಸತ್ಯಾಗ್ರಹ ಸೇರಿದಂತೆ ಹಲವು ಯೋಜನೆಗಳನ್ನು 'ಗೂರ್ಖಾಲ್ಯಾಂಡ್' ರಾಜ್ಯ ಸ್ಥಾಪನೆಯನ್ನು ಎದುರು ನೋಡುತ್ತಿರುವ ಈ ಪಕ್ಷ ಪ್ರಕಟಿಸಿದೆ.

ಡಾರ್ಜಲಿಂಗ್, ಕುರ್ಸೆಯಾಂಗ್, ಕಾಲಿಂಪಾಂಗ್, ಸಿಲಿಗುರಿ ಮತ್ತು ದೋರಾಸ್‌ನ ಐದು ಉಪ ವಿಭಾಗಗಳಲ್ಲಿ ಗೂರ್ಖಾ ಜನ್ಮಮುಕ್ತಿ ಮೋರ್ಚಾದ (ಜಿಜೆಎಂ) 21 ಕಾರ್ಯಕರ್ತರು ಐದು ಗುಂಪುಗಳಾಗಿ ಆಮರಣಾಂತ ಉಪವಾಸವನ್ನು ಕೈಗೊಂಡಿದ್ದಾರೆ ಎಂದು ಆ ಪಕ್ಷದ ಮುಖಂಡ ಭೀಮಾಳ್ ಗುರಾಂಗ್ ಪ್ರಕಟಿಸಿದ್ದಾರೆ.

ಅಲ್ಲದೆ ದೆಹಲಿ ಮತ್ತು ಕೊಲ್ಕತ್ತಾಗಳಲ್ಲಿ ಧರಣಿ ಸತ್ಯಾಗ್ರಹಗಳನ್ನು ನಡೆಸಲು ಕೂಡ ಪಕ್ಷದ ಬೆಂಬಲಿಗರು ಯೋಚಿಸುತ್ತಿದ್ದಾರೆ.

ಪಶ್ಚಿಮ ಬಂಗಾಲ ಮತ್ತು ಡಾರ್ಜಲಿಂಗ್‌ಗಳ ನಡುವಿನ ನೇಪಾಳಿಗಳೇ ತುಂಬಿರುವ ಪ್ರದೇಶವನ್ನು 'ಗೂರ್ಖಾಲ್ಯಾಂಡ್' ಎಂಬ ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂದು 1975ರಿಂದಲೇ ಅಲ್ಲಿನ ಜನತೆ ಬೇಡಿಕೆಯನ್ನು ಮುಂದಿಡುತ್ತಾ ಬಂದಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದ್ದರೂ ಈಡೇರದಿದ್ದ ತೆಲಂಗಾಣ ಪ್ರತ್ಯೇಕ ರಾಜ್ಯ ಬೇಡಿಕೆಯು ಕೆಲವೇ ದಿನಗಳ ಕೆ. ಚಂದ್ರಶೇಖರ ರಾವ್ ಅವರ ಆಮರಣಾಂತ ಉಪವಾಸದಿಂದಾಗಿ ನಡೆಯುತ್ತಿರುವುದು 'ಗೂರ್ಖಾಲ್ಯಾಂಡ್'ಗೂ ಸ್ಫೂರ್ತಿಯಾಗಿದೆ.

ಇದೇ ರೀತಿ ಪ್ರತ್ಯೇಕ ರಾಜ್ಯ ಬೇಕೆಂದು ದೇಶದ ಹಲವೆಡೆ ಹೋರಾಟಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆಗಳು ಗೋಚರಿಸುತ್ತಿವೆ. ಈಶಾನ್ಯದ ಕೆಲವು ರಾಜ್ಯಗಳಲ್ಲಿ ಹಿಂಸಾತ್ಮಕ ಹೋರಾಟ ನಡೆಯುತ್ತಿರುವುದರ ಹಿಂದೆ ಕೂಡ ಪ್ರತ್ಯೇಕ ರಾಜ್ಯದ ಬೇಡಿಕೆಯಿದೆ.

ಕೇಂದ್ರ ಸರಕಾರವು ಪ್ರತ್ಯೇಕ ರಾಜ್ಯ ರಚನೆ ಸಂಬಂಧ ಆಯೋಗವನ್ನೇನಾದರೂ ರಚಿಸಿದಲ್ಲಿ ಎಲ್ಲಾ ಬೇಡಿಕೆಗಳನ್ನು ಪರಿಗಣನೆ ನಡೆಸಬಹುದಾಗಿದ್ದು, ಹಾಗಾದಲ್ಲಿ ಭಾರತವು ಕನಿಷ್ಠ 50 ರಾಜ್ಯಗಳಿಗೆ ಸಾಕ್ಷಿಯಾಗಬಹುದಾಗಿದೆ.

ತೆಲಂಗಾಣ ಮತ್ತು ಗೂರ್ಖಾಲ್ಯಾಂಡ್ ಸೇರಿದಂತೆ ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಪ್ರತ್ಯೇಕ ರಾಜ್ಯದ ಕೂಗು ಆಗಾಗ ಕೇಳಿ ಬರುತ್ತಿದೆ. ಅವುಗಳಲ್ಲಿ ಪ್ರಮುಖವಾದುವುಗಳನ್ನು ಈ ಕೆಳಗೆ ನೀಡಲಾಗಿದೆ.

- ಬೃಹತ್ ರಾಜ್ಯ ಉತ್ತರ ಪ್ರದೇಶವನ್ನು ವಿಭಜಿಸಿ ಬಂದೇಲ್‌ಖಂಡ್, ಹರಿತ್ ಪ್ರದೇಶ್ ಮತ್ತು ಪೂರ್ವಾಂಚಲ್ ರಾಜ್ಯಗಳನ್ನು ಸೃಷ್ಟಿಸುವುದು.
- ಮೇಘಾಲಯವನ್ನು ಪ್ರತ್ಯೇಕಿಸಿ ಗಾರೋಸ್ ಮತ್ತು ಖಾಸಿಸ್ ಎಂಬ ಎರಡು ರಾಜ್ಯಗಳನ್ನು ರಚಿಸುವುದು.
- ಅಸ್ಸಾಂನಿಂದ ಬೋಡೋಲ್ಯಾಂಡ್ ಎಂಬ ಪ್ರತ್ಯೇಕ ರಾಜ್ಯ ನಿರ್ಮಾಣ.

ಉಳಿದಂತೆ ಕರ್ನಾಟಕದಿಂದ ಕೂರ್ಗ್, ಮಹಾರಾಷ್ಟ್ರದಿಂದ ವಿದರ್ಭ, ಗುಜರಾತ್‌ನಿಂದ ಸೌರಾಷ್ಟ್ರ, ಬಿಹಾರದಿಂದ ಮಿಥಿಲಾಂಚಲ್, ಒರಿಸ್ಸಾದಿಂದ ಮಹಾಕೋಸಲ ಮತ್ತು ಜಮ್ಮು-ಕಾಶ್ಮೀರದಿಂದ ಲಡಾಖ್ & ಜಮ್ಮು ಎಂಬ ರಾಜ್ಯಗಳನ್ನು ರಚಿಸಬೇಕೆಂಬ ಬೇಡಿಕೆಯೂ ಬೆನ್ನಿಗಿದೆ.
ಸಂಬಂಧಿತ ಮಾಹಿತಿ ಹುಡುಕಿ