ತೆಲಂಗಾಣ ಪ್ರತ್ಯೇಕ ರಾಜ್ಯ ಕುರಿತಂತೆ ಯಾವುದೇ ದುಡುಕಿನ ನಿರ್ಧಾರಕ್ಕೆ ಕೇಂದ್ರ ಸರಕಾರ ಮುಂದಾಗುವುದಿಲ್ಲ ಎಂದು ಕಾಂಗ್ರೆಸ್ ಸಂಸದರ ನಿಯೋಗಕ್ಕೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ.
ಆಂಧ್ರ ಕರಾವಳಿ ಮತ್ತು ರಾಯಲಸೀಮೆ ಪ್ರಾಂತ್ಯದ ಕೆ.ಎಸ್. ರಾವ್ ನೇತೃತ್ವದ ಸಂಸದರ ನಿಯೋಗವು ಇಂದು ಪ್ರಧಾನ ಮಂತ್ರಿಯವರನ್ನು ಭೇಟಿಯಾಗಿ 40 ನಿಮಿಷಗಳ ಕಾಲ ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ಅಭಯ ನೀಡಿದ ಸಿಂಗ್, ಆತುರದ ನಿರ್ಧಾರಕ್ಕೆ ಕೇಂದ್ರ ಮುಂದಾಗದು ಎಂದು ತಿಳಿಸಿದ್ದಾರೆ ಎಂದು ನಿಯೋಗವು ಹೇಳಿದೆ.
ತೆಲಂಗಾಣ ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಪರಿಗಣಿಸಲಾಗುತ್ತದೆ ಎಂಬ ಗೃಹ ಸಚಿವ ಪಿ. ಚಿದಂಬರಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಾವ್, ಇದರಲ್ಲಿ ಹೊಸತೇನೂ ಇಲ್ಲ; ಕಾಂಗ್ರೆಸ್ ಮತ್ತು ಕೇಂದ್ರದ ನಿಲುವನ್ನು ಅವರು ಪುನರುಚ್ಛರಿಸಿದ್ದಾರೆ, ಅಷ್ಟೇ ಎಂದು ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಈ ಸಂಬಂಧ ನಿಲುವಳಿ ಸೂಚನೆಯನ್ನು ಕೈಗೊಂಡ ನಂತರವಷ್ಟೇ ಪ್ರತ್ಯೇಕ ರಾಜ್ಯದ ಪ್ರಕ್ರಿಯೆ ಆರಂಭವಾಗುತ್ತದೆ ಎಂದಷ್ಟೇ ಸಚಿವರು ತಿಳಿಸಿದ್ದಾರೆ ಎಂದು ರಾವ್ ಸ್ಪಷ್ಟಪಡಿಸಿದರು.
ತೆಲಂಗಾಣ ಪ್ರತ್ಯೇಕ ರಾಜ್ಯ ಸ್ಥಾಪನೆ ಕುರಿತು ಮುಖ್ಯಮಂತ್ರಿ ಕೆ. ರೋಸಯ್ಯನವರ ನೇತೃತ್ವದ ಪಕ್ಷದ ಸಮಿತಿಯೊಂದನ್ನು ಇದೇ ವರ್ಷದ ಫೆಬ್ರವರಿ ತಿಂಗಳಲ್ಲೇ ರಚಿಸಲಾಗಿತ್ತು. ಹಾಗಾಗಿ ಇದರಲ್ಲಿ ಹೊಸ ವಿಚಾರಗಳೇನೂ ಇಲ್ಲವೆಂದು ಅವರು ವಿವರಣೆ ನೀಡಿದರು.
ಗೃಹ ಸಚಿವರ ಹೇಳಿಕೆಯನ್ನು ಆಂಧ್ರದ ಕರಾವಳಿ ಮತ್ತು ರಾಯಲಸೀಮೆ ಜನತೆ ತಪ್ಪಾಗಿ ಅರ್ಥೈಸಿಕೊಂಡಿರುವುದರಿಂದ ಪ್ರತಿಭಟನೆ, ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಾರೆ. ಜನ ಆಕ್ರೋಶಗೊಂಡಿರುವುದರಿಂದ ನಾವೀಗ ನಮ್ಮ ಕ್ಷೇತ್ರಗಳಿಗೆ ವಾಪಸಾಗುವಂತಿಲ್ಲ ಎಂದರು.