ಅನಂತಪುರಂನಲ್ಲಿನ ಕರ್ನಾಟಕ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಚಟುವಟಿಕೆಗೆ ನಿಷೇಧಿಸಿ ಆಂಧ್ರಪ್ರದೇಶ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈದರಾಬಾದ್ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಅಕ್ರಮ ಗಣಿಗಾರಿಕೆ ಕುರಿತಂತೆ ವಿಪಕ್ಷಗಳ ಒತ್ತಡಕ್ಕೆ ಮಣಿದಿದ್ದ ಆಂಧ್ರ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಅಲ್ಲದೇ, ಸುಪ್ರೀಂಕೋರ್ಟ್‌ನಿಂದ ನೇಮಕವಾದ ಕೇಂದ್ರ ಉನ್ನತಾಧಿಕಾರ ಸಮಿತಿ ಶಿಫಾರಸಿನ ಮೇರೆಗೆ ಓಎಂಸಿ ಗಣಿಗಾರಿಕೆ ಚಟುವಟಿಕೆ ನಿಷೇಧಿಸಿ ಆಂಧ್ರಸರ್ಕಾರ ಹೊರಡಿಸಿತ್ತು.
ಆದರೆ ಆಂಧ್ರಪ್ರದೇಶ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಜನಾರ್ದನ ರೆಡ್ಡಿ ಆಂಧ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ವಿಭಾಗೀಯ ಪೀಠ,ಆಂಧ್ರ ಸರ್ಕಾರ ಹೊರಡಿಸಿದ್ದ ಆರು ಗಣಿ ಸ್ಥಗಿತ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಗಣಿಗಾರಿಕೆಗೆ ಆಂಧ್ರ ಹೈಕೋರ್ಟ್‌ನಿಂದ ಆದೇಶ ದೊರೆತ ನಂತರ ಗಣಿಗಾರಿಕೆ ಮತ್ತೆ ಆರಂಭಿಸಲಾಗುವುದು ಎಂದು ಓಎಂಸಿ ಕಾನೂನು ಸಲಹೆಗಾರ ರಾಮಚಂದ್ರ ರೆಡ್ಡಿ ತಿಳಿಸಿದ್ದಾರೆ.